ಲಾಟರಿ ಮೂಲಕ ಫಲಾನುಭವಿಗಳಿಗೆ ಮನೆ ವಿತರಣೆ

ಅರಸೀಕೆರೆ, ಆ. ೩- ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಗರ ವ್ಯಾಪ್ತಿಯ ವಸತಿ ರಹಿತರಿಗೆ ಸೂರು ಕಲ್ಪಿಸುವ ಮಹತ್ವಾಕಾಂಕ್ಷೆ ಯೋಜನೆ ಸಾಕಾರಗೊಂಡಿದ್ದು ಮೊದಲ ಹಂತದಲ್ಲಿ ೩೫೩ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆ ವಿತರಿಸಲಾಗುವುದು ಎಂದು ಆಶ್ರಯ ನಿವೇಶನ ಹಂಚಿಕೆ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹತ್ತಾರು ವರ್ಷಗಳಿಂದ ನಗರದಲ್ಲಿ ವಾಸವಿರುವ ಬಡ ಹಾಗೂ ನಿರ್ಗತಿಕರು ನಗರದಲ್ಲಿ ಒಂದು ಸೂರು ನಿರ್ಮಿಸಿಕೊಳ್ಳಬೇಕೆಂಬ ಕನಸು ಕಟ್ಟಿಕೊಂಡು ದಿನ ದೂಡುತ್ತಾ ಬಂದಿದ್ದರು ಈಗ ಅವರ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎಂದು ಸಂತಸ ಹಂಚಿಕೊಂಡರು.
ನಗರಸಭೆ ಸದಸ್ಯರು ಒಳಗೊಂಡಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆಗೂಡಿ ವಾರ್ಡ್‌ವಾರು ಸಭೆ ಮಾಡಿ ಸಾರ್ವಜನಿಕರ ಸಮ್ಮುಖದಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಮೂಲಕ ಸಾವಿರಾರು ವಸತಿ ರಹಿತರನ್ನು ಗುರುತಿಸಲಾಗಿತ್ತು ಈ ಪೈಕಿ ಸರ್ಕಾರದ ನಿರ್ದೇಶನದಂತೆ ಬ್ಯಾಂಕ್ ಮೂಲಕ ೧೦ ಸಾವಿರ ರೂ.ಗಳನ್ನು ಪಾವತಿಸಿ ಹೆಸರು ನೋಂದಾಯಿಸಿಕೊಂಡಿರುವ ಮೊದಲನೇ ಹಂತದ ಫಲಾನುಭವಿಗಳಿಗೆ ಆಗಸ್ಟ್ ೬ರಂದು ಲಾಟರಿ ಮೂಲಕ ಮನೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಉಳಿದ ಫಲಾನುಭವಿಗಳಿಗೆ ಎರಡನೇ ಹಂತದಲ್ಲಿ ಗೃಹಗಳನ್ನು ಹಂಚಿಕೆ ಮಾಡಲಾಗುವುದು. ವಸತಿ ರಹಿತ ನಗರದ ಪ್ರತಿಯೊಬ್ಬರಿಗೂ ಆಶ್ರಯ ನಿವೇಶನ ಯೋಜನೆ ಅಡಿ ಮನೆ ನೀಡಲಾಗುವುದು. ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ಗಿರೀಶ್ ಮಾತನಾಡಿ, ನಗರದಲ್ಲಿ ಮನೆ ನಿರ್ಮಿಸಿಕೊಳ್ಳಬೇಕು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದ ಬಡ ಹಾಗೂ ನಿರ್ಗತಿಕ ಫಲಾನುಭವಿಗಳ ಕನಸು ನನಸಾಗುತ್ತಿದ್ದು ಮತ್ತೊಂದೆಡೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಶ್ರಮ ಸಾರ್ಥಕ ಎನಿಸಿದೆ. ವಸತಿರಹಿತ ನಗರವಾಸಿ ಕುಟುಂಬಗಳಿಗೆ ಸುಸರ್ಜಿತ ಮನೆ ನಿರ್ಮಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕೆ ಸ್ಥಳೀಯವಾಗಿ ನಗರಸಭೆ ಕೂಡಾ ಶ್ರಮಿಸಲಿದೆ ಎಂದರು.
ವಸತಿ ಗೃಹಗಳ ಹಂಚಿಕೆ ಕೂಡಾ ಪಾರದರ್ಶಕವಾಗಿ ನಡೆಯಲಿದ್ದು ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಫಲಾನುಭವಿಗಳು ಖುದ್ದು ಹಾಜರಿದ್ದು ತಮ್ಮ ದೊರೆಯುವ ಮನೆಗಳನ್ನು ಗುರುತಿಸಿಕೊಂಡು ನೆಮ್ಮದಿಯ ಜೀವನ ನಡೆಸುವಂತೆ ಶುಭ ಹಾರೈಸಿದರು.
ಸಭೆಯಲ್ಲಿ ತಹಶೀಲ್ದಾರ್ ವಿಭಾ ವಿದ್ಯಾರಾಥೋಡ್, ನಗರಸಭೆ ಉಪಾಧ್ಯಕ್ಷ ಕಾಂತೇಶ್, ಪೌರಾಯುಕ್ತ ಬಸವರಾಜ್ ಶಿಗ್ಗಾವಿ, ತಾ.ಪಂ. ಸಹಾಯಕ ನಿರ್ದೇಶಕ ವಿನಯ್‌ಕುಮಾರ್, ನಗರಸಭೆ ಸದಸ್ಯರಾದ ವೆಂಕಟಮುನಿ, .ಭಾಸ್ಕರ್, ಈಶ್ವರ್, ಜಾಕಿರ್, ಮೇಲುಗಿರಿಗೌಡ, ಆಶ್ರಯ ಸಮಿತಿ ಮಾಜಿ ನಾಮ ನಿರ್ದೇಶನ ಸದಸ್ಯ ಜಿ.ಎನ್ ಮನೋಜ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.