ಲಾಟರಿ ಎಂಪಿ ಖೂಬಾಗೆ ನನ್ನ ಬಗ್ಗೆ ಮಾತನಾಡುವ ನೈತಿಕೆಯಿಲ್ಲ

ಭಾಲ್ಕಿ:ಮಾ.18: ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಲಾಟರಿ ಎಂಪಿ ಆಗಿರುವ ಭಗವಂತ ಖೂಬಾ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ ಎಂದು ಶಾಸಕ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.

ಕೇಂದ್ರದ ಮಂತ್ರಿ ಖೂಬಾ ಹೇಳಿಕೆ ಕುರಿತು ಪ್ರಕಟಣೆ ಹೊರಡಿಸಿರುವ ಶಾಸಕರು, ನಾನು ಅಧಿಕಾರಿಗಳು, ಗುತ್ತಿಗೆದಾರರು ಸೇರಿ ಇತರರನ್ನು ಎಲ್ಲಿಯು ಬ್ಲ್ಯಾಕ್‍ಮೇಲ್ ಮಾಡಿಲ್ಲ, ಅಂತಹ ಪರಿಸ್ಥಿತಿ ನನಗೆ ಬಂದಿಲ್ಲ, ಮುಂದೆ ಬರೋದು ಇಲ್ಲ. ಆದರೆ ನೀವು ಅಧಿಕಾರಿಗಳ ಮೇಲೆ ದಬ್ಬಾಳಕೆ ನಡೆಸಿ ಒತ್ತಡ ತಂದು ಗುತ್ತಿಗೆಗೆ ಅನರ್ಹ ಇದ್ದರೂ ಕೂಡ ನಿಮ್ಮ ಸಹೋದರ ಸಂಬಂಧಿಗಳಿಗೆ ಕೋಟ್ಯಾಂತರ ರೂ ಕಾಮಗಾರಿ ಗುತ್ತಿಗೆ ಕೊಡಿಸಿದ್ದೀರಿ. ಈ ಬಗ್ಗೆ ದಾಖಲೆ ಸಮೇತ ನಿಮ್ಮ ಮುಂದಿಡುತ್ತೇನೆ ಎಂದು ಸವಾಲು ಹಾಕಿದರು.

ನಾನು ಸುಮಾರು ಮೂರ್ನಾಲ್ಕು ದಶಕಗಳಿಂದ ಸಮಾಜ ಸೇವೆಯೆಂದು ತಿಳಿದು ರಾಜಕೀಯದಲ್ಲಿದ್ದೇನೆ. ಆದರೆ ನೀವು ರಾಜಕೀಯ ಕ್ಷೇತ್ರವನ್ನು ಧಂದೆಯನ್ನಾಗಿ ಮಾಡಿಕೊಂಡಿದ್ದೀರಿ. ಯಾವುದೇ ಆಧಾರ ಇಲ್ಲದೇ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದೀರಿ. ಇದರಿಂದ ಸಮಯ ವ್ಯರ್ಥವಾಗುತ್ತದೆ ಹೊರತು ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ.

ನಾನು ಜಿಲ್ಲಾ ಉಸ್ತುವಾರಿ ಸಚಿವನಿದ್ದ ಸಂದರ್ಭದಲ್ಲಿ ಅಧಿಕಾರ ಮತ್ತು ಅನುದಾನ ಎಲ್ಲಿಯು ದುರ್ಬಳಕೆ ಮಾಡಿಕೊಂಡಿಲ್ಲ. ಬೇಕಿದ್ದರೇ ರಾಜ್ಯದಲ್ಲಿ ನಿಮ್ಮದೇ ಸರಕಾರ ಇದೆ. ತನಿಖೆ ನಡೆಸಿ ಎಂದು ಕಿಡಿಕಾರಿದರು.

ಬಿಜೆಪಿ ಬರೀ ವರ್ಗಾವಣೆಯನ್ನು ಧಂದೆ ಮಾಡಿಕೊಂಡಿದೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಲಂಚಾಟ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ನಿಮ್ಮ ಗುತ್ತಿಗೆದಾರ ರಾಜ್ಯದಲ್ಲಿನ ಕಮಿಷನ್‍ಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಜನರ ಮುಂದೆ ಹಚ್ಚಹಸಿರಾಗಿದೆ. ನಿಮ್ಮ ಕರ್ಮಕಾಂಡ ರಾಜ್ಯದ ಜನ ನೋಡುತ್ತಿದ್ದಾರೆ.

ಬಿಜೆಪಿ ಸರಕಾರ ಬಂದ ಮೇಲೆ ವರ್ಗಾವಣೆ ಧಂದೆಯಲ್ಲಿ ಯಾರು ತೊಡಗಿದ್ದಾರೆ. ಅಧಿಕಾರಿಗಳನ್ನು ಯಾರು ಹೆದರಿಸುತ್ತಿದ್ದಾರೆ. ಲಂಚ ಪಡೆಯುತ್ತಿರುವವರು ಯಾರು ? ಅರ್ಹತೆ ಇಲ್ಲದಿದ್ದರೂ ಕೋಟ್ಯಾಂತರ ರೂ ಕಾಮಗಾರಿ ಗುತ್ತಿಗೆ ಮಾಡುತ್ತಿರುವವರು ಯಾರು ? ಭ್ರಷ್ಟಾಚಾರದಲ್ಲಿ ಯಾರು ತೊಡಗಿದ್ದಾರೆ ಎಲ್ಲವೂ ರಾಜ್ಯದ ಜನರ ಗಮನಕ್ಕಿದೆ.

ಕೇಂದ್ರದ ಯೋಜನೆ ತರದೇ ಶಾಸಕರ ಅಧೀನದಲ್ಲಿ ಬರುವ ರಾಜ್ಯ ಸರಕಾರದ ಕಾರ್ಯಕ್ರಮಗಳಿಗೆ ಶಿಫಾರಸ್ಸು ಮಾಡಿರುವುದಾಗಿ ಸಂಸದರು ಹೇಳುತ್ತಿರುವುದು ಸತ್ಯಕ್ಕೆ ದೂರ. ನಮ್ಮ ಪರಿವಾರ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟು ಕೊಂಡು ಕೆಲಸ ಮಾಡಿಕೊಂಡು ಬಂದಿದೆ. ಸದಾ ಜನರ ಸೇವೆಯಲ್ಲಿ ಇದ್ದೇವೆ. ಕ್ಷೇತ್ರದ ಜನರ ಆಶೀರ್ವಾದದಿಂದ ಸತತ ಮೂರು ಅವಧಿಗೆ ಶಾಸಕನಾಗಿ ತಾಲೂಕಿನ ಅಭಿವೃದ್ಧಿ ಜತೆಗೆ ಜನರ ಕಷ್ಟ-ದುಖದಲ್ಲಿ ಭಾಗಿಯಾಗಿದ್ದೇನೆ.

ಚುನಾವಣೆ ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಆಣೆ ಪ್ರಮಾಣಕ್ಕೆ ಮುಂದಾಗಿರುವುದು ನೋಡಿದರೇ ಅವರ ಪಕ್ಷದ ಮುಖಂಡರ ಮತ್ತು ಜನರ ಮೇಲೆ ಭರವಸೆ ಇಲ್ಲದಂತೆ ಕಾಣುತ್ತದೆ ಎಂದು ತಿಳಿಸಿದ್ದಾರೆ.