ಲಾಕ್ ಡೌನ್ ಮಾಡುವ ಚಿಂತನೆ ಇಲ್ಲ:ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಏ.13- ಕೋವಿಡ್ ಸಂಬಂಧಿಸಿದಂತೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಚಿಂತನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿಯವರು ಕೂಡ ಕರೆ ಮಾಡಿ ಮಾತನಾಡಿದ್ದಾರೆ. ವಿಪಕ್ಷದವರ ಜೊತೆ ಸಭೆ ಮಾಡಿ, ಅವರ ಸಲಹೆಯನ್ನೂ ಪಡೆಯುತ್ತೇವೆ. ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡುತ್ತೇವೆ.ಇನ್ನು, ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಸವಕಲ್ಯಾಣದಲ್ಲಿ ಜಾತಿವಾರು ಸಭೆ ಮಾಡುತ್ತಿರೋ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿ, ಆ ರೀತಿ ಏನನ್ನೂ ಮಾಡಿಲ್ಲ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ವಿಶ್ವಾಸವಿದೆ. ನಮ್ಮ ಬಗ್ಗೆ ಮಾತನಾಡದಿದ್ದರೆ ಅವರಿಗೆ ಸಮಾಧಾನ ಇಲ್ಲ. ಹಾಗಾಗಿ ಮಾತನಾಡುತ್ತಾರೆ ಅಷ್ಟೇ ಎಂದು ನುಡಿದರು.

ಎರಡು ವಿಧಾನಸಭೆ ಚುನಾವಣಾ ಪ್ರಚಾರ ಮುಗಿಸಿ ಬಂದಿದ್ದೇನೆ. ನಾಳೆ ಹನ್ನೆರಡು ಗಂಟೆ ಮೇಲೆ ಬೆಳಗಾವಿ, ಗೋಕಾಕ್​ಗೆ ತೆರಳುತ್ತೇನೆ. ಮೂರು ಕ್ಷೇತ್ರಗಳ ಉಪಚುನಾವಣೆ ಗೆಲ್ಲುವ ಭರವಸೆ ಇದೆ. ಇಪ್ಪತ್ತು ಸಾವಿರ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಿಂಗಳು ಪ್ರತಿಭಟಿಸಿದರೂ ಬೇಡಿಕೆ ಈಡೇರಿಕೆ ಆಗಲ್ಲ

ಇನ್ನೊಂದು ತಿಂಗಳು ಪ್ರತಿಭಟನೆ ನಡೆಸಿದರೂ ಸಾರಿಗೆ ನೌಕರರ ಆರನೇ ವೇತನದ ಬೇಡಿಕೆ ಈಡೇರಿಸಲು
ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವ ಕಾರಣಕ್ಕೂ ಮುಷ್ಕರ ನಿರತ ನೌಕರರಿಗೆ ವೇತನ ಬಿಡುಗಡೆ ಮಾಡಲ್ಲ. ಕೆಲಸ ಮಾಡಿದವರಿಗೆ ಮಾತ್ರ ವೇತನ ನೀಡಲಾಗುತ್ತದೆ. ಸಾರಿಗೆ ಸೇವೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿದ್ದೇವೆ. ಯಾವ ಕಾರಣಕ್ಕೂ ಆರನೇ ವೇತನದ ಅನ್ವಯ ಸಂಬಳ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಯಾರ ಮಾತು ಕೇಳಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾಗಿ ಯಾರನ್ನೂ ಕರೆದು ಮಾತನಾಡುವ ಪ್ರಮೆಯವೇ ಇಲ್ಲ. ಇನ್ನು ಒಂದು ತಿಂಗಳು ಸತ್ಯಾಗ್ರಹ ಮಾಡಿದರೂ ಬಗ್ಗುವ ಪ್ರಮೆಯ ಇಲ್ಲ ಎಂದು ಸಂಧಾನ ಸಭೆಯ ಸಾಧ್ಯತೆಯನ್ನು ತಳ್ಳಿ ಹಾಕಿದರು.

ಮುಷ್ಕರ ನಿರತ ಸಾರಿಗೆ ನೌಕರರಿಗೆ ವೇತನ ನೀಡುವುದಿಲ್ಲ, ಅವರೊಂದಿಗೆ ಮಾತುಕತೆಯೂ ಇಲ್ಲ.
ಅಲ್ಲದೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಈ ರೀತಿ ಮುಷ್ಕರ ಮಾಡಿ ಜನರಿಗೆ ತೊಂದರೆ ಮಾಡುತ್ತಿರುವುದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.