ಲಾಕ್ ಡೌನ್ ಭೀತಿ; ಕಾರ್ಮಿಕ ವರ್ಗಕ್ಕೆ ನೆರವು ನೀಡಲು ಮನವಿ

ದಾವಣಗೆರೆ. ಮೇ.೨: ಅಂತರಾಷ್ಟ್ರೀಯ ಮೇ ದಿನದ ಅಂಗವಾಗಿ ಎಐಟಿಯುಸಿ ಜಿಲ್ಲಾ ಸಮಿತಿವತಿಯಿಂದ ಆನ್ ಲೈನ್ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಈ ಕಾರ್ಯಕ್ರಮವನ್ನುಉದ್ದೇಶಿಸಿ ಎಐಟಿಯುಸಿ ಯ ರಾಜ್ಯ ಉಪಾದ್ಯಕ್ಷ ಕಾಮ್ರೇಡ್ ಎಂ.ಶಶಿಧರ್ ಮಾತನಾಡಿದರುಇದೀಗ ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ದ ಎರಡನೇ ಅಲೆಯು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಕಳೆದ ವರ್ಷದ ಕರಾಳ ಲಾಕ್ಡೌನ್ ನೆನಪುಗಳು ಇನ್ನೇನು ಮಾಸಿ ಮರೆಯಾಗುತ್ತಿವೆ ಎಂದುಕೊಳ್ಳುತ್ತಿರುವಾಗ ಸದ್ದಿಲ್ಲದೆ ಮತ್ತೊಮ್ಮೆ ಲಾಕ್ ಡೌನ್ ಭೀತಿ ದುಡಿಯುವ ಜನಕ್ಕೆ ಆವರಿಸುತ್ತಿದೆ. ಮತ್ತೇ ಮುಂಬೈನಂತಹ ನಗರಗಳಿಂದ ಹುಟ್ಟಿದೂರುಗಳಿಗೆ ವಲಸೆ ಕಾರ್ಮಿಕರು ಮರಳುವುದು, ಶಾಲಾ ಕಾಲೇಜು-ಹಾಸ್ಟೇಲ್ಗಳ ಬಂದ್ ಮಾಡಿರುವುದು, ದುಡಿಯುವವರು ಕೆಲಸದಿಂದ ವಜಾವಾಗುತ್ತಿರುವ, ವೇತನ ಕಡಿತ ಮತ್ತಿತರ ಸಂಕಷ್ಟಗಳು ದುಸ್ವಪ್ನದಂತೆ ದುತ್ತೆಂದು ಬಂದು ನಿಲ್ಲುತ್ತಿವೆ.
ಹೀಗೆ ಒಂದೆಡೆ ಕೊವಿಡ್ ಎರಡನೇ ಅಲೆಯು ಆಳುವವರ ನಿಷ್ಕಾಳಜಿ, ಯೋಜನೆಯಿಲ್ಲದ ನೀತಿಯಿಂದ ರುದ್ರತಾಂಡವ ಆಡುತ್ತಿರುವ, ಸಾಮಾನ್ಯ ಜನ ಹುಳುಗಳಂತೆ ಸಾಯುತ್ತಿರುವ ಭೀಕರ ಪರಿಸ್ಥಿತಿಯನ್ನು ಆತಂಕದಿಂದ ಗಮನಿಸುತ್ತಿದ್ದೇವೆ. ಇನ್ನೊಂದೆಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಥಾರೀತಿ ಬಂಡವಾಳಶಾಹಿ ಮಾಲೀಕರ ಕಾರ್ಫೋರೇಟ್ ಮನೆತನಗಳ ಹಿತವನ್ನು ಕಾಪಾಡಲು ಲಜ್ಜೆಯಿಲ್ಲದೆ ರೈತ ವಿರೋಧಿ ಕಾರ್ಮಿಕ ವಿರೋಧಿ ನೀತಿಗಳನ್ನು, ಕರಾಳ ಕಾಯ್ದೆಗಳನ್ನು ಅನುಸರಿಸುತ್ತಿವೆ. ಹೀಗೆ ದುಡಿಯುವವರ ಉದ್ಯೋಗ ಹಾಗೂ ಉದ್ಯೋಗದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಅತ್ಯಂತ ಕೆಟ್ಟ ಸಂದರ್ಭದಲ್ಲಿ ಈ ಎಲ್ಲಾ ಅನಿಷ್ಠಗಳ ವಿರುದ್ಧ ಹೋರಾಡಲು ಸ್ಫೂರ್ತಿಯನ್ನು ನೀಡುವ ಐತಿಹಾಸಿಕ ಮೇ ದಿನ ಮತ್ತೇ ಬಂದಿದೆ.ಈ ಐತಿಹಾಸಿಕ ಜವಾಬ್ದಾರಿಯನ್ನು ಪೂರೈಸುವ ಹೋರಾಟದ ಸಂಕಲ್ಪ ಕೈಗೊಳ್ಳೋಣ
ಎಂದು ಕರೆ ನೀಡಿದರು, ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾ ಅದ್ಯಕ್ಷರಾದ ಮಂಜುನಾಥ ಕೈದಾಳೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಜಿಲ್ಲಾ ಕಾರ್ಯದರ್ಶಿಯಾದ ಮಂಜುನಾಥ ಕುಕ್ಕುವಾಡ ಮಾತಾಡಿದರು, ತಿಪ್ಪೇಸ್ವಾಮಿ ಅಣಬೇರು ಸ್ವಾಗತ ಕೋರಿದರು, ವಂದನಾರ್ಪಣೆಯನ್ನು ಕಾಮ್ರೇಡ ಪ್ರಕಾಶ ಎಲ್.ಎಚ್ ಮಾಡಿದರು. ಈ ಸಭೆಯಲ್ಲಿ ಆಶಾ ಕಾರ್ಯಕರ್ತೆಯರು, ಹಾಸ್ಟೇಲ್ ಕಾರ್ಮಿಕರು, ವಿಶ್ವವಿದ್ಯಾಲಯ ನೌಕರರು, ಯುಬಿಡಿಟಿ ಸಿ&ಡಿ ಗ್ರೂಪ್ ನೌಕರರು, ವಿಂಡ್ ಮಿಲ್ ಮತ್ತು ಸೋಲಾರ್ ಕಾರ್ಮಿಕರು ಸೇರಿದಂತೆ ನೂರಾರು ಜನ ಪೇಸ್ ಬುಕ್ ಮುತ್ತ ಗೂಗಲ್ ಮೀಟ್‌ನಲ್ಲಿ ಭಾಗವಹಿಸಿದ್ದರು.