ಲಾಕ್ ಡೌನ್ ನಿಯಮ ಪಾಲಿಸದ ಕಾರ್ಖಾನೆಗಳು- ಆರೋಪ

ಮರಿಯಮ್ಮನಹಳ್ಳಿ ಜೂ.04: ಕೊರೋನಾ ರೋಗದ ಸೋಂಕು ತೀವ್ರವಾಗಿ ಹರಡುತ್ತಿರುವ ತುರ್ತು ಸಂದರ್ಭದಲ್ಲಿ ಲಾಕ್ಡೌನ್ ನಿಯಮಾವಳಿಗಳನ್ನು ಯಾವುದೇ ಕಾರ್ಖಾನೆಯವರು ಅನುಸರಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಸುಮ್ಮನೆ ಕೂತಿದ್ದೀರಾ ? ಎಂದು ಹ.ಬೊ.ಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ ಗಂಭೀರವಾಗಿ ಆರೋಪಿಸಿದರು.
ಅವರು ಗುರುವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪರಿಶೀಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ಹೊಸಪೇಟೆ ತಾಲೂಕಿನಲ್ಲಿಯೇ ಮರಿಯಮ್ಮನಹಳ್ಳಿ ಪಟ್ಟಣದ ಸುತ್ತಮುತ್ತ ಕೊರೋನಾ ಎರಡನೆ ಅಲೆಯ ಸೋಂಕು ಹರಡುವಿಕೆಯ ಪ್ರಕರಣಗಳು ಅತಿ ಹೆಚ್ಚು ದಾಖಲಾಗಿವೆ. ಸೋಂಕು ಹರಡುವಲ್ಲಿ ಕಾರ್ಖಾನೆಗಳ ಪಾತ್ರವೂ ಇದ್ದು, ಇಲ್ಲಿಯ ಬಿ.ಎಂ.ಎಂ, ಸ್ಮಯೋರ್, ಎಸ್.ಎಲ್.ಆರ್ ಹಾಗೂ ಇತರೆ ಕಾರ್ಖಾನೆಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ಕೆಲಸ ಮಾಡುವ ಕಾರ್ಮಿಕರನ್ನು ಕಾರ್ಖಾನೆಯ ಸ್ಥಾನಿಕ ಕೇಂದ್ರಗಳಲ್ಲಿಯೇ ಉಳಿಸಿಕೊಳ್ಳಬೇಕಾಗಿತ್ತು. ಆದರೆ ಯಾವ ಕಾರ್ಖಾನೆಯವರೂ ಆ ಕೆಲಸ ಮಾಡಿಲ್ಲ. ದಿನ ನಿತ್ಯವೂ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮದ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಂದ ಓಡಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಅಲ್ಲದೇ ಇವರನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ಏನೂ ಮಾಡದೇ ಕೈಕಟ್ಟಿ ಕುಳಿತಿದ್ದಾರೆ ಎಂದರೆ ಇದರ ಅರ್ಥವೇನು ಎಂದು ಖಡಕ್ ಆಗಿ ಪ್ರಶ್ನಿಸಿದರು.
ಕೊರೋನಾ ಸೋಂಕಿತರಿಗೆ ಕಾರ್ಖಾನೆಯವರ ಕೊಡುಗೆ ಏನು? ಸ್ಥಳೀಯ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡ ಕಾರ್ಖಾನೆಗಳು ಇಲ್ಲಿಯ ಜನರಿಗೆ ಯಾವ ಸಹಾಯವನ್ನೂ ಮಾಡಿಲ್ಲ. ಅವರು ಮನಸ್ಸು ಮಾಡಿದ್ದರೆ ಮರಿಯಮ್ಮನಹಳ್ಳಿ ಭಾಗದಲ್ಲಿ ಸ್ವ ಇಚ್ಛೆಯಿಂದ ಒಂದು ಕೋವಿಡ್ ಆಕ್ಸಿಜನ್ ಬೆಡ್‍ಗಳ ಆಸ್ಪತ್ರೆ ನಿರ್ಮಿಸಿ ಸೇವೆ ಮಾಡಬಹುದಿತ್ತು ಎಂದು ಆರೋಪಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯ ಅವಧಿ ಮುಗಿದರೂ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜುಲೈ 20 ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ನಂತರ ಮಾಜಿ ಶಾಸಕ ನೇಮಿರಾಜ್ ನಾಯ್ಕರ ವಿರುದ್ಧ ಹರಿಹಾಯ್ದು ಯಾವುದೇ ಸಂವಿಧಾನಿಕ ಪ್ರೋಟೋಕಾಲ್ ವ್ಯಾಪ್ತಿಗೆ ಬಾರದಿದ್ದರೂ ಆಸ್ಪತ್ರೆಗಳಿಗೆ ಹಾಗೂ ಕಛೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಹಾಗೂ ಧಮ್ಕಿ ಹಾಕುವ ಕಾರ್ಯಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ವಿಚಾರ ಎಂದು ವ್ಯಂಗ್ಯವಾಡಿದರು. ಅಲ್ಲದೇ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿಯ ಕೋವಿಡ್ ಆಸ್ಪತ್ರೆ ಉತ್ತಮವಾಗಿದೆ ಎಂದು ಆರೋಗ್ಯ ಸಚಿವರಿಂದಲೇ ಪ್ರಶಂಸೆಗೆ ಒಳಗಾಗಿದ್ದರೂ ಅಂತಹ ಆಸ್ಪತ್ರೆಯ ಚಿಕಿತ್ಸೆ ಬಗ್ಗೆ ಟಿ.ವಿ ಮಾಧ್ಯಮದವರನ್ನು ಕರೆಸಿಕೊಂಡು ಸುಳ್ಳು ಸುಳ್ಳು ವರದಿಗಳನ್ನು ಮಾಡಿಸುತ್ತಾರೆ. ಅಲ್ಲದೇ ಅಧಿಕಾರಿಗಳಿಂದ ವರ್ಗಾವಣೆಗೆ ಹಣವಸೂಲಿ ಮಾಡುವುದರಲ್ಲಿಯೇ ತೊಡಗಿಕೊಂಡಿದ್ದಾರೆ. 2023ಕ್ಕೆ ಚುನಾವಣಾ ಕುಸ್ತಿಅಖಾಡ ಸಿದ್ಧವಾಗಿದ್ದು, ಅವರಿಗೆ ಧೈರ್ಯವಿದ್ದರೆ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿದು ಪ್ರಜೆಗಳ ಮುಂದೆ ಶಕ್ತಿ ಪ್ರದರ್ಶನ ಮಾಡಲಿ ಎಂದು ಕುಟುಕಿದರು.
ಇದಕ್ಕೂ ಮುನ್ನ ಶಾಸಕ ಭೀಮಾನಾಯ್ಕ ತಿಮ್ಮಲಾಪುರದಲ್ಲಿನ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಕೊರೊನಾ ಸೋಂಕಿತರ ಕುಶಲೋಪರಿಯನ್ನು ಮಾಡಿ ಅವರಿಗೆ ಮೊಟ್ಟೆ ಹಾಲು, ಹಣ್ಣು, ಬ್ರೆಡ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ಡಿ.ಎನ್.ಕೆರೆ ಗ್ರಾ.ಪಂ. ಸದಸ್ಯ ಸೋಮಪ್ಪ ಉಪ್ಪಾರ್, ತಾಲೂಕು ಆರೋಗ್ಯಾಧಿಕಾರಿ ಭಾಸ್ಕರ್, ತಾ.ಪಂ. ಇ.ಓ. ವಿಶ್ವನಾಥ, ಪ.ಪಂ.ನ ಮುಖ್ಯಾಧಿಕಾರಿ ಉದಯಸಿಂಗ್, ವೈದ್ಯರಾದ ಡಾ. ರಾಧಾಕೃಷ್ಣ, ಡಾ.ಮಂಜುಳಾ, ಪ.ಪಂ.ಸದಸ್ಯರಾದ ಆದಿಮನಿ ಹುಸೇನ್ ಭಾಷಾ, ಬಂಗಾರಿ ಮಂಜುನಾಥ, ಮುಖಂಡರಾದ ಪವಾಡಿ ಹನುಮಂತಪ್ಪ, ಬಾಲಕೃಷ್ಣ ಬಾಬು, ತಾಯಪ್ಪ, ಹೆಚ್.ಬುಡೇನ್‍ಸಾಬ್, ಪೋತಲಕಟ್ಟಿ ಜಂಬಣ್ಣ, ಚಿಲಕನಹಟ್ಟಿ ಬೋಸಪ್ಪ, ಮರಿಯಮ್ಮನಹಳ್ಳಿಯ ವಿಜಯ್‍ಕುಮಾರ್, ಎಂ.ಅಂಕ್ಲೇಶ್, ಕೆ.ಹೆಚ್.ಸುಬ್ರಮಣಿ ಹಾಗೂ ಇತರರು ಇದ್ದರು.