ಲಾಕ್ ಡೌನ್ : ಕಲಬುರಗಿ ನಗರ ಸಂಪೂರ್ಣ ಸ್ತಬ್ಧ

ಕಲಬುರಗಿ,ಮೇ.20-ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದು, ಇಡೀ ನಗರಕ್ಕೆ ನಗರವೇ ಸ್ತಬ್ಧಗೊಂಡಂತಾಗಿದೆ.
ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನ ಸಮೇತ ರಸ್ತೆಗಿಳಿದಿದ್ದು, ಅನಗತ್ಯವಾಗಿ ರಸ್ತೆಗಿಳಿಯದಂತೆ ಧ್ವನಿವರ್ಧಕದ ಮೂಲಕ ಜನರಿಗೆ ಎಚ್ಚರಿಕೆ ನೀಡಿದರು.
ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದರೆ, ನಗರದ ಜನನಿಬೀಡ ಪ್ರದೇಶಗಳಾದ ಕೇಂದ್ರ ಬಸ್ ನಿಲ್ದಾಣ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಜನರಿಲ್ಲದೆ ಬಣಗುಡುತ್ತಿದ್ದವು.
ಹಾಲು ಖರೀದಿ ಮತ್ತು ಹೋಟೆಲ್ ಗಳಲ್ಲಿ ಊಟ, ಉಹಾರ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿದ್ದರೂ ಹೆಚ್ಚು ಜನ ಹೋಟೆಲ್ ಗಳತ್ತ ಸುಳಿಯಲಿಲ್ಲ. ಬೈಕ್ ಮೇಲೆ ಓಡಾಡುವರನ್ನು ಹಿಡಿದು ಪೊಲೀಸರು ವಿಚಾರಣೆ ನಡೆಸಿದರಲ್ಲದೆ, ಸುಖಾಸುಮ್ಮನೆ ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಿದರು.
ಹೆಚ್ಚಿನ ಜನ ಮನೆಯಲ್ಲಿಯೇ ಕಾಲ ಕಳೆದರು. ಆದರೂ ನಗರದ ಕೆಲವು ಕಡೆ ಜನ ಬೈಕ್ ಮೇಲೆ ಓಡಾಡುತ್ತಿದ್ದದ್ದು ಅಲ್ಲಲ್ಲಿ ಕಂಡುಬಂತು.