ಲಾಕ್ ಡೌನ್ ಎರಡನೇ ದಿನ : ನಿಲ್ಲದ ಜನರ ಓಡಾಟ

ರಾಯಚೂರು.ಏ.೨೯- ಲಾಕ್ ಡೌನ್‌ನ ಎರಡನೇ ದಿನ ಜನ ಸಂಚಾರ ನಿನ್ನೆಗಿಂತ ಅಧಿಕವಾಗಿ ರಸ್ತೆಗಳಲ್ಲಿ ಕಂಡು ಬಂದಿತು.
ಪೊಲೀಸರು ಆಟೋ, ದ್ವಿಚಕ್ರ ವಾಹನಗಳಲ್ಲಿ ಜಪ್ತಿ ಮಾಡಿ, ದಂಡ ವಿಧಿಸಿದರೂ, ಜನರ ಓಡಾಟ ಮಾತ್ರ ಅಲ್ಲಲ್ಲಿ ತೀವ್ರವಾಗಿಯೇ ಕಂಡು ಬಂದಿತು. ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಕುಟುಂಬಗಳು ನಿಗದಿತ ಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ಜನರನ್ನು ಸೇರಿಸುವ ಪರಿಪಾಠ ಮುಂದುವರೆದಿದೆ. ಕೊರೊನಾ ಮಹಾಮಾರಿಯ ತೀವ್ರತೆ ಮತ್ತು ಜನರ ಸಾವಿನ ಆಕ್ರಂದಗಳ ಮಧ್ಯೆ ಲಾಕ್ ಡೌನ ನಿಯಮ ಉಲ್ಲಂಘಿಸಿ, ಓಡಾಡುವವರಿಗೆ ಮತ್ತೇ ಮತ್ತೇ ಬುದ್ದಿ ಮಾತು ಹೇಳುವುದು ಇಂದು ಮುಂದುವರೆಯಿತು. ಇಂದು ನಗರದ ವಿವಿಧ ರಸ್ತೆಗಳಲ್ಲಿ ಅನೇಕ ಆಟೋಗಳನ್ನು ಜಪ್ತಿ ಮಾಡಲಾಯಿತು. ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಯಿತು. ದಂಡ ವಿಧಿಸುವುದಕ್ಕೇ ಲೆಕ್ಕವೇ ಇರಲಿಲ್ಲ.
ನಿನ್ನೆಯಿಂದ ೧೪ ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿತ್ತು. ನಿನ್ನೆ ಲಾಕ್ ಡೌನ್ ಬಿಗಿಯಾಗಿಯೇ ನಿರ್ವಹಿಸಲಾಯಿತು. ಆದರೆ, ಇಂದು ಜನರ ಓಡಾಟ ನಿನ್ನೆಗಿಂತ ತುಸು ಹೆಚ್ಚಾಗಿರುವುದು ಗಮನಾರ್ಹವಾಗಿತ್ತು. ಮಾರುಕಟ್ಟೆ ಬಂದ್ ಮಾಡಿದ್ದರೂ, ಜನರು ಎಲ್ಲಿಗೆ ಹೋಗುತ್ತಾರೆ ಎನ್ನುವುದು ಪೊಲೀಸರಿಗೆ ತಿಳಿಯದ ರಹಸ್ಯವಾಗಿತ್ತು. ವಿವಿಧ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾತ್ರವಲ್ಲದೇ, ಅನಗತ್ಯವಾಗಿ ಯುವಕರ ಓಡಾಟ ವ್ಯಾಪಕವಾಗಿತ್ತು. ಅಂಗಡಿ ಮುಂಗಟ್ಟುಗಳು ಯಥಾರೀತಿಯಲ್ಲಿ ಬಂದ್ ಮಾಡಲಾಗಿತ್ತು.
ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಳಿಸಿತ್ತು. ಆದರೂ, ಜನರ ಓಡಾಟ ಮಾತ್ರ ಮುಂದುವರೆದಿತ್ತು. ಯಾರನ್ನೂ ಕೇಳಿದರೂ, ಆಸ್ಪತ್ರೆಯ ನೆಪ ಹೇಳಿ, ತಪ್ಪಿಸಿಕೊಳ್ಳಲಾಗುತ್ತಿತ್ತು. ನಿನ್ನೆ ಅಲ್ಲಲ್ಲಿ ಪೊಲೀಸರು ಲಾಠಿ ಬೀಸಿದ್ದರು. ಆದರೆ, ಇಂದು ಪೊಲೀಸರು ಮೃದುವಾಗಿಯೇ ವರ್ತಿಸಿದರು. ಪೊಲೀಸರ ಈ ಮೃದುತ್ವ ಜನರ ಓಡಾಟಕ್ಕೆ ಪ್ರೇರಣೆಯಾಯಿತೇ?. ಜಿಲ್ಲೆಯಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಜನರಲ್ಲಿ ಆತಂಕವೇ ಇಲ್ಲದಿದ್ದರೇ, ಇದನ್ನು ನಿಯಂತ್ರಿಸುವುದು ಹೇಗೆ ಎನ್ನುವ ಪ್ರಶ್ನೆ ಅಧಿಕಾರಿಗಳನ್ನು ಕಾಡುವಂತೆ ಮಾಡಿತು.