ಲಾಕ್ ಡೌನ್ ಇದ್ದಷ್ಟು ದಿನ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿ!

ವಿಜಯಪುರ, ಜೂ.1-ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ವಿರುದ್ದ ಕಿಡಿಕಾರುವಲ್ಲಿ ವಿರೋಧ ಪಕ್ಷದವರೂ ನಾಚಿಸುವಂತೆ ಮಂಚೂಣಿಯಲ್ಲಿ ಬರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ವಿರುದ್ದ ಗುಡುಗಿದ್ದಾರೆ.
ಈಗಿರುವ ಲಾಕ್ ಡೌನ್ ಎಲ್ಲಾ ವೇಸ್ಟ್, ಜೂನ್ ಏಳರ ನಂತರ ಲಾಕ್ ಡೌನ್ ವಿಸ್ತರಿಸಬಾರದು ಎಂದು ಅಭಿಪ್ರಾಯ ಪಟ್ಟಿರುವ ಯತ್ನಾಳ್, ಲಾಕ್ ಡೌನ್ ಇದ್ದರೆ ಮಾತ್ರ ಯಡಿಯೂರಪ್ಪನವರ ಸಿಎಂ ಕುರ್ಚಿ ಭದ್ರ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಸಿ.ಪಿ.ಯೋಗೇಶ್ವರ್‍ಗೆ ಏನೂ ಆಗುವುದಿಲ್ಲ, ಒಂದಾ ಅವರು ಡಿಸಿಎಂ, ಇಲ್ಲವೇ ಇಂಧನ ಸಚಿವರಾಗಬಹುದು, ಇಲ್ಲವೋ ಯಡಿಯೂರಪ್ಪ ರಾಜೀನಾಮೆ ನೀಡಬಹುದು ಎನ್ನುವ ಅಭಿಪ್ರಾಯವನ್ನು ಯತ್ನಾಳ್ ವ್ಯಕ್ತ ಪಡಿಸಿದ್ದಾರೆ.
ಯಡಿಯೂರಪ್ಪನವರ ಸುತ್ತಮುತ್ತಲಿರುವ ಹೊಗಳು ಭಟ್ಟರೇ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕು ಎನ್ನುವ ನಿರ್ಣಯಕ್ಕೆ ಬಂದಿದ್ದಾರೆ. ನಾವು ನೇರಾನೇರ ಹೇಳುತ್ತೇವೆ, ನಾವು ಅವರ ಶತ್ರುಗಳಲ್ಲ, ಅವರು ವೈರಿಗಳು ಅವರ ಜೊತೆಗೇ ಇದ್ದಾರೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಮುರುಗೇಶ್ ನಿರಾಣಿ, ಯೋಗೇಶ್ವರ್ ಮತ್ತು ಎನ್.ಆರ್.ಸಂತೋಷ್ ಅವರನ್ನು ಯಡಿಯೂರಪ್ಪನವರು ಯಾವ ಕಾರಣಕ್ಕೂ ತೆಗೆಯುವುದಿಲ್ಲ. ಈ ಮೂವರನ್ನು ತೆಗೆಯುವ ಶಕ್ತಿ ಸಿಎಂಗೆ ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಲಾಕ್ ಡೌನ್ ಅನ್ನು ಹಂತಹಂತವಾಗಿ ಸಡಿಲಗೊಳಿಸಬೇಕು. ಮುಖ್ಯಮಂತ್ರಿಗಳು ತಮ್ಮ ಸಲುವಾಗಿ ಲಾಕ್ ಡೌನ್ ಮಾಡುವುದು ಒಳ್ಳೆಯದಲ್ಲ. ಲಾಕ್ ಡೌನ್ ಇದ್ದರೆ ಮಾತ್ರ ಅವರು ಸಿಎಂ ಆಗಿ ಮುಂದುವರಿಯುತ್ತಾರೆ. ಯಾಕೆಂದರೆ, ಏಕಪಕ್ಷೀಯ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಾರೆ. ಲಾಕ್ ಡೌನ್ ತೆಗೆದರೆ ನನ್ನನ್ನೂ ತೆಗೆಯಬಹುದು ಎನ್ನುವ ಭಯ ಬಿಎಸ್ವೈಗೆ ಕಾಡುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.