ಲಾಕ್ ಡೌನ್‍ನಿಂದಾಗಿ ರೈತರು, ದಲಿತರು, ಪೌರಕಾರ್ಮಿಕರ ಬದುಕು ಬೀದಿಪಾಲು: ಶ್ರೀನಾಥ ಪೂಜಾರಿ

ವಿಜಯಪುರ, ಜೂ.1-ದಲಿತ ಸಮುದಾಯಗಳು ಈ ಕೋವಿಡ್ ಸಂದರ್ಭದಲ್ಲಿ ಅತ್ಯಂತ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿವೆ. ಹೀಗಾಗಿ ಸರಕಾರ ಇನ್ನಾದರೂ ದಲಿತ ಸಮುದಾಯದ ಬಡವರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆಗಾಗಿ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕೆಂದು ವಿಜಯಪುರ ವಿದ್ಯಾರ್ಥಿ ದಲಿತ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿ ಶ್ರೀನಾಥ ಪೂಜಾರಿ ಮಾತನಾಡಿ, ಕೊವಿಡ್-19 ಪರಿಣಾಮದಿಂದಾಗಿ ಇಡೀ ದಲಿತ ಸಮುದಾಯ ತತ್ತರಿಸಿ ಹೋಗಿದೆ. ನಗರ ಹಾಗೂ ಹಳ್ಳಿಗಳಲ್ಲಿಯ ಮಧ್ಯಮ ವರ್ಗದ ಬದುಕಿನ ಅಸ್ತಿತ್ವವನ್ನೇ ಅಲುಗಾಡಿಸಿಬಿಟ್ಟಿದೆ. ನಿರಂತರ ಸಾವು ನೋವುಗಳು ಎಲ್ಲರಲ್ಲಿ ಆತಂಕ ಸೃಷ್ಟಿಸಿದೆ ಕೊನೆ ರೋಗ ನಿಯಂತ್ರಣಕ್ಕಾಗಿ ಮಾಡಲಾಗಿರುವ ಲಾಕ್ ಡೌನ್‍ನಿಂದಾಗಿ ರೈತರು, ದಲಿತರು, ಪೌರಕಾರ್ಮಿಕರು, ಅಭಿಮನದಿ, ಆದಿವಾಸಿ, ಬುಡಕಟ್ಟು ಸಮುದಾಯಗಳು, ಕೂಲಿ ಕಾರ್ಮಿಕರು, ಕಟ್ಟಿಗೆ ಕೆಲಸಗಾರರು, ಬೀದಿ ಬದಿಯ ವ್ಯಾಪಾರಗಾರರು ಮುಂತಾದವರ ಬದುಕು ಬೀದಿಪಾಲಾಗಿ ಮೂಲಭೂತ ಸೌಕರ್ಯಗಳಾದ ಒಂದು ಹೊತ್ತಿನ ಊಟ ವೈದ್ಯಕೀಯ ಸೌಲಭ್ಯಗಳು ಸಿಗದೇ ಜನರು ಕಂಗಾಲಾಗಿದ್ದಾರೆ ಎಂದು ಹೇಳಿದರು.
ಕೊರೊನಾ ರೋಗದಿಂದ ಆಗುತ್ತಿರುವ ಸಾವು ನೊವುಗಳು ಒಂದು ಕಡೆಯಾದರೆ, ಮೂಲಭೂತ ವೈದ್ಯಕೀಯ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗದೆ ಸಂಭವಿಸುತ್ತಿರುವ ಸಾವುಗಳು ಹೆಚ್ಚಾಗುತ್ತಿವೆ, ಅಸ್ಪತ್ರೆಗೆ ಹೋದರೆ ಮರಳಿ ಜಿವಂತವಾಗಿ ಬರಲಾದೆವೆಂಬ ಆತಂಕ ಎಲ್ಲರಲ್ಲಿ ಮನೆ ಮಾಡಿದೆ . ಬಡವರಿಗೆ ವೈದ್ಯಕೀಯ ಖರ್ಚುವೆಚ್ಚಗಳನ್ನು ಭರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಸಂಕಷ್ಟ ಸಂದರ್ಭದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ವಿಜಯಪುರದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯದ ಜನರ ಎದೆಯಲ್ಲಿ ಕಿಚ್ಚು ಹಚ್ಚಿÀ ದಾಖಲೆಯ ಹೊರಾಟಗಳಾದರೂ ಆ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಜಿಲ್ಲೆ ಹಾಗೂ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇವೆ ಇದಕ್ಕೆಲ್ಲ ಸರಕಾರ ಕಡಿವಾಣ ಹಾಕಬೇಕು ಎಂದರು.
ಇನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು, ಗೋಳಿಬೀಡು ಠಾಣಾ ವ್ಯಾಪ್ತಿಯ ಕಿರಗುಂದ ಗ್ರಾಮದ ಈ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ವರದಿಯಾಗಿರುವುದು ಆಘಾತಕಾರಿ ಸಂಗತಿ. ಅದರಲ್ಲೂ ಜಾತಿ ದೌರ್ಜನ್ಯಕ್ಕೆ ಒಳಗಾದ ದುರ್ಬಲ ವರ್ಗದವರಿಗೆ ರಕ್ಷಣೆ ಕೊಡಬೇಕಾದ ಪೊಲಿಸ್ ಅಧಿಕಾರಿಯೇ ಇಂತಹ ಅಮಾನುಷ, ಅಮಾನವೀಯ ಕೃತ್ಯವೆಸಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ದುರ್ಘಟನೆಯು ಕರ್ನಾಟಕ ಸರಕಾರ ಮತ್ತು ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ ಎಂದು ವಿಷಾದಿಸಿದರು.
ಅದಕ್ಕೆ ಕಾರಣವಾದ ಗೋಣಿಬೀಡು ಪೊಲೀಸ್ ಠಾಣೆಯ ಪಿ.ಎಸ್.ಐ ಅರ್ಜುನನ್ನು ಸೇವೆಯಿಂದ ವಜಾ ಮಾಡುವ ಮೂಲಕ ಸರಕಾರ ತನ್ನ ನೈತಿಕ ಘನತೆಯನ್ನು ತೊರಿಸಿಕೊಳ್ಳಬೇಕಾಗಿದೆ. ಈ ಸಂಕಷ್ಟದ ಸಂದರ್ಭದಲ್ಲೂ ದಲಿತರ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿರುವುದು ದುರದೃಷ್ಟಕರ ಎಂದರು.
ಮೇ -12 ರಂದು ವಿಜಯಪುರದ ಬಸವನಬಾಗೇವಾಡಿ, ತಾಲ್ಲೂಕಿನ ಕುದುರೆ ಸಾಲವಾಡಿ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಬಾವಿಯೊಂದರಲ್ಲಿ ಹಾಕಿರುವ ಪ್ರಕರಣ ನಡೆದಿದೆ. ಇವು ರಾಜ್ಯದಲ್ಲಿ ಹಲವಾರು ಬೆಳಕಿಗೆ ಬಂದ ಘಟನೆಗಳಾದರೆ, ಬೆಳಕಿಗೆ ಬಾರದ್ದು ಇನ್ನೆಷ್ಟೋ ಗೊತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು. ದಲಿತರಿಗೆ ಭದ್ರತೆ ಇಲ್ಲದಂತಾಗಿರುವುದು ಕಳವಳಕಾರಿಯಾಗಿದೆ ಎಂದರು.
ದಲಿತ ಸಮುದಾಯಗಳ ಕಷ್ಟ-ನಷ್ಟಗಳ ಬಗ್ಗೆ ನಿಗಾ ವಹಿಸಿ ಕಾವಲಿನಂತೆ ಕೆಲಸ ಮಾಡಬೇಕಾದ ಸಮಾಜ ಕಲ್ಯಾಣ ಸಚಿವರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಈ ಸಂಕಷ್ಟದ ಸಂದರ್ಭದಲ್ಲಿ ಏನು ಮಾಡುತ್ತಿದ್ದಾರೋ ತಿಳಿಯದಾಗಿದೆ. ಸಚಿವರು ಈಗಲಾದರೂ ಎಚ್ಚೆತ್ತುಕೊಂಡು ದಲಿತ ಸಮುದಾಯದ ಬಡವರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆಗಾಗಿ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.