ಲಾಕ್‍ಡೌನ್ ಹೊಡೆತಕ್ಕೆ ಬೆಳೆದ ಕಲ್ಲಂಗಡಿ ಮಣ್ಣು ಪಾಲು ಮಾಡಿದ ರೈತ

ಕಲಬುರಗಿ,ಮೇ.31: ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಅನಿವಾರ್ಯವಾಗಿ ಲಾಕ್‍ಡೌನ್ ಮೊರೆ ಹೋಗಿದೆ. ಇದು ಒಂದೆಡೆ ಸೋಂಕು ತಡೆಗೆ ವರದಾನವಾದರೆ, ಮತ್ತೊಂದೆಡೆ ಬಡವರು, ನಿರ್ಗತಿಕರ ಪಾಲಿಗೆ ಅಕ್ಷರಶ: ನರಕದಂತಾಗಿದೆ. ಅದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಸೇಡಂ ತಾಲ್ಲೂಕಿನ ದುಗನೂರ್ ಗ್ರಾಮದ ರೈತನೋರ್ವ ಲಕ್ಷಾಂತರ ರೂ.ಗಳನ್ನು ಸುರಿದು ಬೆಳೆದ ಕಲ್ಲಂಗಡಿ ಬೆಳೆಯನ್ನು ನಾಶಪಡಿಸಿದ್ದಾನೆ.
ತಾಲ್ಲೂಕಿನಾದ್ಯಂತ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಮಾರುಕಟ್ಟೆ ಬಂದ್ ಮಾಡಲಾಗಿದ್ದು, ಪರಿಣಾಮ ವ್ಯಾಪಾರಕ್ಕೂ ಅವಕಾಶವಿಲ್ಲ. ಇತ್ತ ಸರ್ಕಾರದ ನೆರವೂ ಇಲ್ಲ. ಆದ್ದರಿಂದ ರೈತ ತನ್ನ ಜೀವನೋಪಾಯಕ್ಕಾಗಿ ಬೆಳೆದಿದ್ದ ಕಲ್ಲಂಗಡಿಯನ್ನು ಮಣ್ಣುಪಾಲು ಮಾಡಿದ್ದಾನೆ.
ದುಗನೂರ್ ಗ್ರಾಮದ ರೈತ ರಾಮಲಿಂಗಯ್ಯ ಕಲಾಲ್ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ 3 ಲಕ್ಷ ರೂ.ಗಳ ಬಂಡವಾಳ ಹಾಕಿ ಕಲ್ಲಂಗಡಿ ಬೆಳೆದಿದ್ದರು. ಇನ್ನೇನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಕ್ಷಾಂತರ ರೂ.ಗಳ ಹಣ ಕೈ ಸೇರುತ್ತದೆ ಎನ್ನುವಾಗಲೇ ಲಾಕ್‍ಡೌನ್ ಜಾರಿ ಮಾಡಲಾಯಿತು. ಇದರಿಂದ ಖರೀದಿದಾರರಿಲ್ಲದೇ ಹೊಲದಲ್ಲಿಯೇ ಕಲ್ಲಂಗಡಿ ಕೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಲ್ಪಸ್ವಲ್ಪ ಮಾರಾಟ ಮಾಡಿದ್ದಾರೆ. ಆದಾಗ್ಯೂ, ಯೋಜಿತ ಮಟ್ಟದಲ್ಲಿ ಮಾರಾಟಕ್ಕೆ ವಿಫಲವಾಗಿ ಬೇಸತ್ತ ರೈತ ಟ್ರ್ಯಾಕ್ಟರ್‍ನಿಂದ ಬೆಳೆ ನಾಶ ಮಾಡಿದ್ದಾರೆ.
ಮೂರು ಲಕ್ಷ ರೂ.ಗಳನ್ನು ಖರ್ಚು ಮಾಡಿ ಬೆಳೆದ ಕಲ್ಲಂಗಡಿ ಬೆಳೆ ನಾಶವಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ಸಹ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ದೊರಕಿಲ್ಲ. ಇದರಿಂದ ತೀವ್ರ ನಷ್ಟ ಎದುರಿಸುತ್ತಿದ್ದೇನೆ. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಕಲ್ಲಂಗಡಿ ಬೆಳೆದ ರೈತ ರಾಮಲಿಂಗಯ್ಯ ಕಲಾಲ್ ಅವರು ತಿಳಿಸಿದ್ದಾರೆ.