ಲಾಕ್‍ಡೌನ್ ಹೊಡೆತಕ್ಕೆ ಟ್ಯಾಕ್ಸಿ ಚಾಲಕರು ಕಂಗಾಲು

ಕಲಬುರಗಿ.ಮೇ.19: ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅದೆಷ್ಟೋ ಜನರ ಕೈಯಲ್ಲಿ ಕೆಲಸವಿಲ್ಲದೇ ಬದುಕು ಬೀದಿಗೆ ಬಂದು ನಿಂತಿದೆ. ಅದರಲ್ಲಿಯೂ ಟ್ಯಾಕ್ಸಿ ಓಡಿಸಿ ಜೀವನ ನಡೆಸುತ್ತಿದ್ದ ಚಾಲಕರು ತಮ್ಮ ಜೀವನ ನಿರ್ವಹಣೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಜೀವನೋಪಾಯಕ್ಕೆ ದಾರಿಯಾಗಿದ್ದ ಟ್ಯಾಕ್ಸಿಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದೆ.
ನಗರದಲ್ಲಿ ಸುಮಾರು 250 ಟ್ಯಾಕ್ಸಿ ಚಾಲಕರ ಕುಟುಂಬಗಳಿವೆ. ಕೊರೋನಾ ಕಫ್ಯೂರ್ಳ ಹಾಗೂ ನಂತರದ ಲಾಕ್‍ಡೌನ್‍ನಿಂದ ವಾಹನಗಳ ಓಡಾಟ ನಿಷೇಧಿಸಲಾಗಿದ್ದು, ಟ್ಯಾಕ್ಸಿ ವಾಹನಗಳು ಮನೆ ಮುಂದೆ ನಿಂತಿದೆ. ಇದರಿಂದಾಗಿ ಟ್ಯಾಕ್ಸಿ ವಾಹನಗಳಲ್ಲಿ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಚಾಲಕರ ಕುಟುಂಬಗಳೀಗ ಬೀದಿಗೆ ಬಂದು ನಿಂತಿದೆ.
ಕಳೆದ ಸುಮಾರು ವರ್ಷಗಳಿಂದ ಟ್ಯಾಕ್ಸಿ ವಾಹನ ನಡೆಸಿಕೊಂಡೇ ಜೀವನ ಸಾಗಿಸುತ್ತಿರುವ ಚಾಲಕರು ಈಗ ಕೈಯಲ್ಲಿ ಕೆಲಸವಿಲ್ಲದೇ ದುಡಿಮೆ, ಕಾಸು ಇಲ್ಲದೇ ಮನೆ ಬಾಡಿಗೆ ಕಟ್ಟಲೂ ಕೂಡ ಪರದಾಡುತ್ತಿದ್ದಾರೆ. ಮನೆಗೆ ಸಿಲೆಂಡರ್ ತರಲು ಆಗ್ತಿಲ್ಲ. ದಿನಸಿ ತರಲು ಕೈಯಲ್ಲಿ ಹಣವಿಲ್ಲ. ಸಾಲ ಮಾಡಬೇಕು ಅಂದರೆ ಸಾಲ ಕೂಡ ಸಿಕ್ತಿಲ್ಲ. ಕೊರೋನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರ ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗೆ ಕರೆದೊಯ್ಯಲೂ ಸಹ ಹಣವಿಲ್ಲದೇ ಜೀವ ಕಳೆದುಕೊಳ್ಳುವ ಆತಂಕದಲ್ಲಿಯೇ ಚಾಲಕರ ಕುಟುಂಬಗಳು ದಿನ ಕಳೆಯುತ್ತಿವೆ.
ಕಳೆದ ವರ್ಷ ಲಾಕ್‍ಡೌನ್ ಸಂದರ್ಭದಲ್ಲಿ ಮೂರು ತಿಂಗಳುಗಳ ಕಾಲ ಟ್ಯಾಕ್ಸಿಗಳು ಮನೆ ಮುಂದೆ ನಿಂತಿದ್ದವು. ನಂತರ ಅನ್‍ಲಾಕ್ ಆದ ಮೇಲೆ ಡೀಸೆಲ್, ಪೆಟ್ರೋಲ್ ಬೆಲೆ ಗಣನೀಯವಾಗಿ ಏರಿಕೆ ಕಂಡಿತ್ತು. ಆದಾಗ್ಯೂ, ವಾಹನಗಳ ಬಾಡಿಗೆ ಬೆಲೆ ಮಾತ್ರ ಏರಿಕೆ ಅಗಲಿಲ್ಲ. ಇದರಿಂದಾಗಿ ಗಳಿಕೆ ಕಡಿಮೆಯಾಗಿತ್ತು. ಹೇಗೋ ಕಡಿಮೆ ಗಳಿಕೆಯಲ್ಲಾದರೂ ಕುಂಟುತ್ತಾ ಜೀವನ ಸಾಗುತ್ತಿತ್ತು. ಈಗ ಮತ್ತೆ ಲಾಕ್‍ಡೌನ್ ಪರಿಣಾಮ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಪೋಲಿಸರು ಗಾಡಿಗಳನ್ನು ಜಪ್ತಿ ಮಾಡುತ್ತಿದ್ದಾರೆ. ಬಾಡಿಗೆ ಮೇಲೆಯೇ ಅವಲಂಬಿತರಾದ ಚಾಲಕರ ಕುಟುಂಬಗಳು ಈಗ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇದೆ.
ಕಳೆದ ಲಾಕ್‍ಡೌನ್ ಸಂದರ್ಭದಲ್ಲಿ ಬ್ಯಾಂಕ್ ಸಾಲ ಮರಳಿಸಲು ಆಗದೇ ಹಲವರು ಜೀವನೋಪಾಯಕ್ಕಾಗಿ ದಾರಿ ದೀಪವಾಗಿದ್ದ ಗಾಡಿಗಳನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಕೂಡ ಇಎಂಐ, ಇನ್ಸೂರೆನ್ಸ್ ಕಟ್ಟಲು ಅಗದೇ ಪರಿಸ್ಥಿತಿ ಗಂಭೀರವಾಗಿದೆ. ಕಳೆದ ಬಾರಿ ಪಾಸ್ ವ್ಯವಸ್ಥೆಯಾದರೂ ಇತ್ತು. ಈ ಬಾರಿ ಅದೂ ಕೂಡ ಮಾಡಿಲ್ಲ. ಕಳೆದ ಬಾರಿ ಬ್ಯಾಂಕಿನವರು ಇಎಂಐ ವಿನಾಯಿತಿ ನೀಡುವಂತೆ ಸರ್ಕಾರ ಸೂಚಿಸಿತ್ತು. ಈ ಬಾರಿ ಅದನ್ನೂ ಸರ್ಕಾರ ಮಾಡಿಲ್ಲ. ಹೀಗಾಗಿ ಹಣಕಾಸು ಸಂಸ್ಥೆಯವರು ಅಸಲು, ಬಡ್ಡಿಗಾಗಿ ಪೀಡಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಏನಾದರೂ ಕ್ರಮಕ್ಕೆ ಮುಂದಾಗಬೇಕು ಅನ್ನೋದು ಚಾಲಕರ ಒತ್ತಾಯವಾಗಿದೆ.