ಲಾಕ್‍ಡೌನ್ ಸಂಕಷ್ಟದಲ್ಲಿನ ಕುಟುಂಬಗಳಿಗೆ ನೆರವು

ಸೈದಾಪುರ:ಜೂ.11:ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಜನತೆ ಲಾಕ್‍ಡೌನ್ ಕಾರಣದಿಂದ ಕೆಲಸವಿಲ್ಲದೆ ಜೀವನ ನಿರ್ವಹಣೆ ಮಾಡಲು ಪರದಾಡುತ್ತಿದ್ದ ಬಡ ಕುಟುಂಬಗಳ ನೆರವಿಗೆ ನಿಂತ ಅಜೀಂ ಪ್ರೇಮ್‍ಜಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸಿಆರ್‍ಪಿ ಸೈಯದ್ ಶೇರ ಅಲಿ ಕೊಂಡಾಡಿದರು.
ಸೈದಾಪುರ ಸೇರಿದಂತೆ ಸುತ್ತಲಿನ ಗ್ರಾಮೀಣ ಜನತೆಗೆ ಮಂಗಳವಾರ ಆಹಾರದ ಕಿಟ್ ವಿತರಣಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದವರು, ವಲಸಿಗರು, ಸೋಂಕಿತರು ಸೇರಿದಂತೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದ ಬಡವರಿಗೆ ಕುಟುಂಬಗಳನ್ನು ಗುರುತಿಸಿ ಸಹಾಯ ಮಾಡುತ್ತಿದ್ದಾರೆ ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಘೋಷಣೆ ಮಾಡಿದ ಸರಕಾರ ಪ್ರತಿಯೊಬ್ಬರ ಕಷ್ಟಗಳಿಗೆ ಸ್ಪಂದಿಸುವುದು ಕಷ್ಟಸಾಧ್ಯ ಇಂತಹ ಸಂಧಿಗ್ಧ ಪರಿಸ್ಥಿಯಲ್ಲಿ ಆರ್ಥಿಕವಾಗಿ ಪ್ರಬಲವಾಗಿರುವ ಸಂಸ್ಥೆ ಹಾಗೂ ವ್ಯಕ್ತಿಗಳು ಬಡವರ ನೆರವಿಗೆ ನಿಲ್ಲುವುದು ಅವಶ್ಯ ಮತ್ತು ಅನಿವಾರ್ಯ ಕೂಡ ಈ ನಿಟ್ಟಿನಲ್ಲಿ ಅಜೀಂ ಪ್ರೇಮ್‍ಜಿ ಸಂಸ್ಥೆ ಬಡ ಜನರಿಗೆ ಆಹಾರದ ಕಿಟ್‍ಗಳನ್ನು ವಿತರಿಸುವ ಮೂಲಕ ಸೊರಗಿದ ಕುಟುಂಬಗಳಿಗೆ ಚೈತನ್ಯವನ್ನು ನೀಡಲಾಗುತ್ತಿದೆ. ಇಬ್ಬರು ಮಕ್ಕಳನ್ನು ಒಳಗೊಂಡ ಚಿಕ್ಕ ಕುಟುಂಬ ಸುಮಾರು ಒಂದು ತಿಂಗಳು ಬಳಸುವಷ್ಟು ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಕಾರ ಸೇರಿದಂತೆ ಅತ್ಯವಶ್ಯಕ ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಎಪಿಎಪ್‍ನ ಸಂಯೋಜಕ ಶಿವಾನಂದ, ಪೊಲೀಸ್ ಪೇದೆಗಳಾದ ಅನ್ವರ್, ವೀರೇಶ, ಶಿಕ್ಷಕ ಷಣ್ಮುಖ, ನಿಶಾಂತ ಸೇರಿದಂತೆ ಮುಂತಾದವರಿದ್ದರು.