ಲಾಕ್‍ಡೌನ್: ಮೇ.22 ನಂತರ ತೀರ್ಮಾನ ಸೂಕ್ತ: ಸಚಿವ ಜೋಶಿ

ಹುಬ್ಬಳ್ಳಿ,ಮೇ18: ರಾಜ್ಯದಲ್ಲಿ ಲಾಕ್‍ಡೌನ್ ಮುಂದುವರೆಸುವ ಕುರಿತು ತಜ್ಞರು ನೀಡಿದ ವರದಿಯನ್ನು ನಾನು ಪರಿಶೀಲಿಸಿಲ್ಲ. ಸದ್ಯ ಮೇ.24 ವರೆಗೆ ಕಠಿಣ ಲಾಕ್‍ಡೌನ್ ಜಾರಿಯಲ್ಲಿದೆ. ಮೇ.22 ನಂತರ ಪರಿಸ್ಥಿತಿಯನ್ನು ನೋಡಿಕೊಂಡು ಲಾಕ್‍ಡೌನ್ ಮುಂದುವರಿಸುವ ಕುರಿತು ಸೂಕ್ತ ತೀರ್ಮಾನ ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂಬುದು ನನ್ನ ಸಲಹೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ ಜಿಟೋ (ಜೈನ್ ಇಟ್ರನ್ಯಾಷಿನಲ್ ಟ್ರೇಡ್ ಆರ್ಗನೈಸೇಶನ್) ವತಿಯಿಂದ ನಿರ್ಮಿಸಲಾದ ಆಕ್ಸಿಜನ್ ಆನ್ ವೀಲ್ಹಿಸ್ ವಾಹನವನ್ನು ಕಿಮ್ಸ್‍ಗೆ ಹಸ್ತಾಂತರಿಸಿ ಮಾತನಾಡಿದರು.

ಸೋಂಕು ಹಬ್ಬುವುದನ್ನು ತಡೆಯಲು ಕಠಿಣ ಲಾಕ್‍ಡೌನ್ ಮುಂದುವರಿಸಲಾಗುವುದು. ಲಾಕ್ ಡೌನ್ ಪರಿಣಾಮದಿಂದ ಕೋವಿಡ್ ಪ್ರಕರಣ ಸಂಖ್ಯೆಯಲ್ಲಿ ಇಳಿಮುಖವಾಗಲು ಸಮಯಬೇಕು. ಬ್ಲಾಕ್ ಫಂಗಸ್ ತೀವ್ರತರನಾಗಿ ಕೋವಿಡ್‍ನಿಂದ ಬಳಲುವವರಿಗೆ ನೀಡುವ ಚಿಕಿತ್ಸೆಯ ಅಡ್ಡಪರಿಣಾಮದಿಂದ ಹೆಚ್ಚಾಗುತ್ತಿದೆ. ಈ ಕುರಿತು ತಜ್ಞ ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಬ್ಲಾಕ್ ಫಂಗಸ್ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆಗೆ ಅಗತ್ಯ ಇರುವ ಔಷಧಗಳನ್ನು ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಒದಗಿಸುವಂತೆ ಕೇಂದ್ರ ಸರ್ಕಾರದ ಆರೋಗ್ಯ ಕಾರ್ಯದರ್ಶಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದೇನೆ. ರಾಜ್ಯದ ಆರೋಗ್ಯ ಸಚಿವರು ಹಾಗೂ ಕಾರ್ಯದರ್ಶಿಗಳಿಗೆ ಟೆಂಡರ್ ಮೂಲಕ ಅಗತ್ಯ ಇರುವ ಔಷಧಗಳನ್ನು ಖರೀದಿಸುವಂತೆ ತಿಳಿಸಿದ್ದೇನೆ. ದೇಶದಲ್ಲಿ ಕೋವಿಡ್ ಪಾಸಿಟಿವ್ ಬಂದವರ ಸಂಖ್ಯೆ ಹೆಚ್ಚಿದ್ದರೂ, ಶೇಕಡವಾರು ಮರಣ ಪ್ರಮಾಣ ಕಡಿಮೆಯಿದೆ. ಕೋವಿಡ್‍ನಿಂದ ಒಬ್ಬರು ಮೃತಪಟ್ಟರು ಅದು ದುಃಖದ ಸಂಗತಿ ಎಂದರು.

ಕಿಮ್ಸ್‍ಗೆ 25 ಬಿ.ಎಲ್. ವೆಂಟಿಲೇರ್ ಹೊಸದಾಗಿ ಆಗಮಿಸಿವೆ. ಜಿಲ್ಲೆಯಲ್ಲಿ ಎಂಟತ್ತು ದಿನಗಳಿಗೆ ಆಗುವಷ್ಟು ಆಕ್ಸಿಜನ್ ಇದೆ. ಜಿಲ್ಲೆಗೆ ಅವಶ್ಯಕತೆ ಇರುವಷ್ಟು ಆಕ್ಸಿಜನ್ ಬೆಡ್‍ಗಳ ಪ್ರಮಾಣ ಹೆಚ್ಚಿಸಲಾಗುವುದು. ಕುವೈತ್‍ನಿಂದ ಆಗಮಿಸಿದ 50 ಮೆಟ್ರಕ್ ಟನ್ ಆಕ್ಸಿಜನ್‍ನ್ನನ್ನು ವಿವಿಧ ಜಿಲ್ಲೆಗೆ ಹಂಚಲಾಗುವುದು. ಸಾರ್ವಜನಿಕರು ಕೋವಿಡ್ ಆಗಮಿಸಿದ ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಿರಿ. ಆರಂಭದಲ್ಲಿ ಚಿಕಿತ್ಸೆ ಪಡೆದವರಿಗೆ ಕೋವಿಡ್‍ನಿಂದ ಹೆಚ್ಚಿನ ತೊಂದರೆಯಾಗಿಲ್ಲ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮನೆಯಲ್ಲಿಯೇ ಇರಿ. 15 ದಿನಗಳಿಗೆ ಆಗುವಷ್ಟು ದಿನಸಿಗಳನ್ನು ಖರೀದಿಸಿ, ಪದೇ ಪದೇ ದಿನಸಿ ಖರೀದಿಸಲು ಕಿರಾಣಿ ಅಂಗಡಿಗಳಿಗೆ ತೆರಳಬೇಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ತುರ್ತು ಸಂದರ್ಭದ ಚಿಕಿತ್ಸೆಗೆ ಸಿದ್ದವಾಯಿತು ಆಕ್ಸಿಜನ್ ಆನ್ ವೀಲ್ಹ್ ವಾಹನ

ಜೈನ್ ಇಟ್ರನ್ಯಾಷಿನಲ್ ಟ್ರೇಡ್ ಆರ್ಗನೈಸೇಶನ್ ವತಿಯಿಂದ ಸೂಲ್ಕ್ ವಾಹನವನ್ನು ತುರ್ತು ಸಂದರ್ಭದ ಚಿಕಿತ್ಸೆಗಾಗಿ ಮಾರ್ಪಡಿಸಲಾಗಿದೆ. ಕೋವಿಡ್‍ನಿಂದ ಬಳಲುತ್ತಿರುವ ರೋಗಿಗಳಿಗೆ ಕಿಮ್ಸ್‍ನಲ್ಲಿ ಬೆಡ್ ದೊರಕುವವರೆಗೆ ವಾಹನದಲ್ಲಿ ಇದ್ದು ಚಿಕಿತ್ಸೆ ಪಡೆಯಬಹದುದಾಗಿದೆ. ಒಟ್ಟು 6 ಜನರಿಗೆ ಆಕ್ಸಿಜನ್ ಸಹಿತ ಇತರೆ ಸೌಕರ್ಯಗಳ ಬಸ್ ನಲ್ಲಿ ಕಲ್ಪಿಸಲಾಗಿದೆ. 72 ಸಾವಿರ ವೆಚ್ಚದ 9 ಲೀಟರ್ ಸಾಮರ್ಥ್ಯದ 6 ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಬಸ್‍ನಲ್ಲಿ ಅಳವಡಿಸಲಾಗಿದೆ. ದೇಶದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳ ಕೊರತೆ ಇರುವುದರಿಂದ ದುಬೈನಿಂದ ಆಮದು ಮಾಡಿಕೊಂಡು ಬಸ್ ಸಿದ್ದಪಡಿಸಲಾಗಿದೆ. ಚೈನ್‍ನಲ್ಲಿ ಈ ಮಾದರಿ 20 ವಾಹನಗಳನ್ನು ಸಿದ್ದಪಡಿಸಿ ಸರ್ಕಾರಕ್ಕೆ ನೀಡಲಾಗಿದೆ. ಮುಂದಿನ ದಿನದಲ್ಲಿ ಧಾರವಾಡ ಜಿಲ್ಲಾ ಆಸ್ಪತ್ರೆಗೂ ಆಕ್ಸಿಜನ್ ಆನ್ ವೀಲ್ಹ್ ವಾಹನ ನೀಡುವುದಾಗಿ ಜಿಟೋ ಸಂಘಟನೆಯ ಹುಬ್ಬಳ್ಳಿ ಅಧ್ಯಕ್ಷ ಶಾಂತಿಲಾಲ್ ಓಸವಾಲ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಪ್ರದೀಪ್ ಶೆಟ್ಟರ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಠಾಣಿ, ಕೆ.ಎಲ್.ಇ. ವಿದ್ಯಾಸಂಸ್ಥೆಯ ಶಂಕ್ರಣ್ಣ ಮುನವಳ್ಳಿ, ಆರ್.ಎಸ್.ಎಸ್. ಸಂಘಟನೆಯ ಶ್ರೀಧರ್ ನಾಡಗೇರಿ, ಜಿಟೋ ಸಂಘಟನೆಯ ರಾಖೇಶ್ ಕಠಾರಿಯಾ, ಗೌತಮ್ ಓಸವಾಲ್, ಕಿಷನ್ ಕಠಾರಿಯಾ ವಿನೋದ್ ಪಠವಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.