ಲಾಕ್‍ಡೌನ್ ಮುಗಿಯುವವರೆಗೂ ಶಿಕ್ಷಕರಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಣೆ ಆದೇಶಕ್ಕೆ ಆಗ್ರಹ

ಕಲಬುರಗಿ,ಮೇ.31:ಲಾಕ್‍ಡೌನ್ ಮುಗಿಯುವವರೆಗೂ ಪ್ರೌಢ ಶಾಲೆಗಳ ಶಿಕ್ಷಕರಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಮುಂದುವರೆಸಿ ಕೂಡಲೇ ಆದೇಶ ಹೊರಡಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಶಶಿಲ್ ಜಿ. ನಮೋಶಿ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳಿಗೆ ಕೋವಿಡ್-19 ಕಾರಣದಿಂದ ಮೇ 24ರವರೆಗೆ ಲಾಕ್‍ಡೌನ್ ಘೋಷಣೆ ಕಾರಣದಿಂದಾಗಿ ಶಿಕ್ಷಕರು ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿತ್ತು ಎಂದು ತಿಳಿಸಿದ್ದಾರೆ.
ತದನಂತರ ರಾಜ್ಯ ಸರ್ಕಾರವು ಜೂನ್ 7ರವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡಿರುವುದರಿಂದ ಶಿಕ್ಷಕರು ಶಾಲೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಲಾಕ್‍ಡೌನ್ ಮುಗಿಯುವವರೆಗೂ ಪ್ರೌಢಶಾಲೆಗಳ ಶಿಕ್ಷಕರಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಮುಂದುವರೆಸಿ ಆದೇಶ ಹೊರಡಿಸುವಂತೆ ಅವರು ಒತ್ತಾಯಿಸಿದ್ದಾರೆ.