ಲಾಕ್‍ಡೌನ್: ಬಡವರ ಹಸಿವು ಹಿಂಗಿಸುತ್ತಿರುವ ನಯಾ ಸವೇರಾ ಸಂಘಟನೆ

ಕಲಬುರಗಿ.ಮೇ.19: ಕೊರೋನಾ ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ನಯಾ ಸವೇರಾ ಸಂಘಟನೆಯ ಸದಸ್ಯರು ಕಳೆದ 9 ದಿನಗಳಿಂದ ಬಡವರ ಹಸಿವು ಹಿಂಗಿಸುವ ಕೆಲಸ ಮಾಡುತ್ತಿದ್ದಾರೆ.
ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ವಿಧಿಸಿರುವ ಲಾಕ್‍ಡೌನ್‍ನಿಂದಾಗಿ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಹೀಗಾಗಿ ನಗರದ ನಯಾ ಸವೇರಾ ಸಂಘಟನೆಯ ಸದಸ್ಯರು ತಾವೇ ಆಹಾರ ತಯಾರಿಸಿ ಹಸಿದವರಿಗೆ ಹಂಚುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.
ಪ್ರತಿನಿತ್ಯ ನಗರದ ರಾಮತೀರ್ಥ, ಜೋಪಡಪಟ್ಟಿ, ಸಂತ್ರಸವಾಡಿಯ ಆಶ್ರಯ ಕಾಲೋನಿ, ರಾಮನಗರ, ಚೌಪಟ್ಟೆ, ಕಣ್ಣಿ ಮಾರುಕಟ್ಟೆ, ಜೋಪಡಿ ಪಟ್ಟಿ, ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾ, ಶ್ರೀ ಶರಣಬಸವೇಶ್ವರ್ ದೇವಸ್ಥಾನ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ವಾಸಿಸುವ ನಿರ್ಗತಿಕರು, ಬಡವರಿಗೆ ಅವರಿದ್ದಲ್ಲಿಗೆ ತೆರಳಿ ಆಹಾರದ ಪೊಟ್ಟಣ ವಿತರಿಸುತ್ತಿರುವುದಾಗಿ ಸಂಘಟನೆ ಅಧ್ಯಕ್ಷ ಮೋದಿನ್ ಪಟೇಲ್ ಅಣಬಿ ಅವರು ತಿಳಿಸಿದ್ದಾರೆ.
ಕೋವಿಡ್ ಸಮಯದಲ್ಲಿಯೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಆಹಾರವನ್ನು ವಿತರಿಸಲಾಯಿತು.