ಲಾಕ್‍ಡೌನ್: ಪಾಲಿಕೆಯಿಂದ ಪೌರಕಾರ್ಮಿಕರಿಗೆ ಸಾರಿಗೆ ಬಸ್ ಸೌಲಭ್ಯ

ಕಲಬುರಗಿ,ಮೇ.27:ಮಹಾನಗರ ಪಾಲಿಕೆಯು ಜನಸಾಮಾನ್ಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಈಗಾಗಲೇ ಆಟೋ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಈಗ ಪೌರ ಕಾರ್ಮಿಕರಿಗಾಗಿ ನೃಪತುಂಗ ನಗರ ಸಾರಿಗೆ ಬಸ್ ಸೌಲಭ್ಯವನ್ನು ಕಲ್ಪಿಸುವ ಮೂಲಕ ಮಾನವೀಯ ಕಾರ್ಯ ಕೈಗೊಂಡಿದೆ.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 1200 ಪೌರ ಕಾರ್ಮಿಕರಿದ್ದು, ಪರಿಸರದ ವಿವಿಧ ಬಡಾವಣೆಗಳಲ್ಲಿ ವಾಸವಾಗಿದ್ದಾರೆ. ಕೊರೋನಾ ಮಹಾಮಾರಿ ನಿಯಂತ್ರಿಸಲು ಈಗಾಗಲೇ ನಾಲ್ಕು ದಿನಗಳವರೆಗೆ ಲಾಕ್‍ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದು, ಇದರಿಂದಾಗಿ ಪೌರ ಕಾರ್ಮಿಕರು ಸಾರಿಗೆ ಸೌಲಭ್ಯವಿಲ್ಲದೇ ಕಿಲೋ ಮಿಟರ್‍ಗಂಟಲೇ ನಡೆದುಕೊಂಡು ಬಂದು ಕೆಲಸಕ್ಕೆ ಹಾಜರಾಗುವ ಅನಿವಾರ್ಯತೆ ಎದುರಾಗಿತ್ತು. ಅಲ್ಲದೇ ಪೋಲಿಸ್ ಸರ್ಪಗಾವಲಿನಲ್ಲಿ ಪೌರ ಕಾರ್ಮಿಕರು ಸುಲಭವಾಗಿ ಕೆಲಸದ ಸ್ಥಳಕ್ಕೆ ತೆರಳಲೂ ಸಹ ಸಾಕಷ್ಟು ಸಮಸ್ಯೆ ಆಗಿತ್ತು.
ಇದನ್ನರಿತ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಕಂಡೆ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಪೌರಕಾರ್ಮಿಕರ ಓಡಾಟಕ್ಕೆ ಐದು ನೃಪತುಂಗ ನಗರ ಸಾರಿಗೆ ಬಸ್‍ಗಳ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ನಗರದ ವಿವಿಧ ಬಡಾವಣೆಗಳಿಂದ ಪೌರ ಕಾರ್ಮಿಕರನ್ನು ಹೊತ್ತು ತರುವ ಸಾರಿಗೆ ಬಸ್‍ಗಳು ಕೆಲಸ ಮುಗಿಸಿದ ಬಳಿಕ ಮನೆಗೆ ಬಿಡುತ್ತಿವೆ.
ಸಂಪೂರ್ಣ ಸಾರಿಗೆ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುತ್ತಿದೆಎ. ಈ ಕುರಿತು ಪಾಲಿಕೆಯ ಆರೋಗ್ಯ ನಿರೀಕ್ಷಕ ರಾಜು ಕಟ್ಟಿಮನಿ ಅವರು ಮಾತನಾಡಿ, ಪಾಲಿಕೆ ಆಯುಕ್ತರ ಆದೇಶದ ಮೇರೆಗೆ ಎಲ್ಲ ಪೌರ ಕಾರ್ಮಿಕರಿಗೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ ಅವರಿಗೆ ಕುಡಿಯಲು ನೀರು, ಆಹಾರ ಹಾಗೂ ಕೊರೋನಾ ಸಂರಕ್ಷಣಾ ಕಿಟ್‍ಗಳನ್ನು ನೀಡಲಾಗಿದೆ. ಪೌರ ಕಾರ್ಮಿಕರು ಬೆಳಗಿನ ಜಾವ ಐದು ಗಂಟೆಗೆ ಕೆಲಸಕ್ಕೆ ಹಾಜರಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಮನೆಗೆ ಮರಳುವರು ಎಂದರು.