ಲಾಕ್‍ಡೌನ್ ನಿಯಮ ಉಲ್ಲಂಘನೆ: ಪುರಸಭಾ ಅಧಿಕಾರಿಗಳ ದಂಡ

ಕೆ.ಆರ್.ಪೇಟೆ. ಜೂ.07: ಪಟ್ಟಣದ ಪುರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ದ ಪುರಸಭಾ ಅಧಿಕಾರಿಗಳು ದಂಡವಿಧಿಸಿದ್ದಾರೆ.
ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಚೌಡೇನಹಳ್ಳಿ ರಸ್ತೆಯಲ್ಲಿ ಅನುಮತಿ ಪಡೆಯದೇ ನಡೆಸುತ್ತಿದ್ದ ತಿಥಿ ಕಾರ್ಯದ ಸಮಾರಂಭಕ್ಕೆ ಭೇಟಿ ನೀಡಿ ಹೆಚ್ಚಿನ ಜನರಿದ್ದ ಕಾರಣಕ್ಕೆ 2000 ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ. ಪಟ್ಟಣದ ಹೇಮಾವರಿ ಬಡಾವಣೆಯ ಕಾಳೇಗೌಡ ಸೊಸೈಟಿಯ ಸಮೀಪದಲ್ಲಿ ಮದುವೆ ನಿಶ್ಚಿತಾರ್ಥ ನಡೆಯುತ್ತಿದ್ದುದನ್ನು ಖಚಿತಪಡಿಸಿಕೊಂಡ ಪುರಸಭಾ ಅಧಿಕಾರಿಗಳ ತಂಡ ಅನಿರೀಕ್ಷಿತ ಭೇಟಿ ನೀಡಿ 2100 ರೂಪಾಯಿಗಳ ದಂಡವನ್ನು ವಿಧಿಸಿದೆ. ಲಾಕ್‍ಡೌನ್‍ನ ಸಮಯ ಮುಗಿದಿದ್ದರೂ ಕದ್ದುಮುಚ್ಚಿ ಕೋಳಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಪಟ್ಟಣ ಹಾಗೂ ಹೊಸಹೊಳಲು ಗ್ರಾಂಗಳ ಕೋಳಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಪುರಸಬಾ ಸಿಬ್ಬಂದಿಗಳು ನಾಲ್ಕು ಅಂಗಡಿಗಳಿಗೆ ತಲಾ 200 ರೂಪಾಯಿಗಳಂತೆ ದಂಡ ವಿಧಿಸಿದ್ದಾರೆ ಎಂದು ಪುರಸಭಾ ಮುಖ್ಯಾಧಿಕಾರಿ ಸತೀಶ್‍ಕುಮಾರ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಹರೀಶ್, ಜಿ.ಎನ್.ಪುಟ್ಟಸ್ವಾಮಿ, ಮಂಟೆಮಂಜು ಸೇರಿದಂತೆ ಪುರಸಬಾ ಸಿಬ್ಬಂಧಿಗಳು ಭಾಗವಹಿಸಿದ್ದರು.