ಲಾಕ್‍ಡೌನ್- ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನತೆ

ಕಂಪ್ಲಿ, ಮೇ.19: ಮೇ.19ರಿಂದ 5 ದಿನಗಳ ಕಾಲ ಜಿಲ್ಲಾಡಳಿತ ವಿಧಿಸಿದ ಸಂಪೂರ್ಣ ಲಾಕ್‍ಡೌನ್ ನಿಮಿತ್ತ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಸಾರ್ವಜನಿಕರು ಬುಧವಾರ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಗುಂಪುಗುಂಪಾಗಿ ಜಮಾಯಿಸಿದ ಚಿತ್ರಣ ಸರ್ವೇಸಾಮಾನ್ಯದಂತೆ ಕಂಡುಬಂತು.
ಐದು ದಿನಗಳ ಕಾಲ ಲಾಕ್‍ಡೌನ್ ಅವಧಿ ಪೂರ್ಣಗೊಳಿಸುವ ಸಲುವಾಗಿ ಸಾರ್ವಜನಿಕರು ದಿನಬಳಕೆಗೆ ಅಗತ್ಯವಿರುವ ದಿನಸಿ, ತರಕಾರಿ, ಹಣ್ಣು ಇತ್ಯಾದಿಗಳನ್ನು ಖರೀದಿ ಮಾಡಿಸಿಕೊಳ್ಳುವ ಸಲುವಾಗಿ ಏಕಾಏಕಿ ರಸ್ತೆಗಿಳಿದರು. ಇಲ್ಲಿನ ಡಾ.ರಾಜ್‍ಕುಮಾರ್ ರಸ್ತೆ, ಮಾರೆಮ್ಮ ದೇವಸ್ಥಾನ ರಸ್ತೆ, ಮಾರ್ಕೆಟ್ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳು ಜನರಿಂದ ಗಿಜಿಗುಡುವ ದೃಶ್ಯಗಳು ಕಂಡುಬಂದವು. ಬೆಳಗ್ಗೆ 9.30ರ ಬಳಿಕ ಸಂಪೂರ್ಣ ಲಾಕ್‍ಡೌನ್ ಕರ್ತವ್ಯಕ್ಕಾಗಿ ರಸ್ತೆಗಿಳಿದ ಪೊಲೀಸರು ಗುಂಪುಗಟ್ಟಿದ್ದ ಸಾರ್ವಜನಿಕರಿಗೆ ತಿಳಿಹೇಳಿ ಗುಂಪು ಚದುರಿಸಿದರು. ಅಂಗಡಿ ಮುಂಗಟ್ಟುಗಳ ಮುಂದೆ ಗುಂಪು ಗುಂಪಾಗಿ ಸೇರಿದ ಜನರನ್ನು ನಿಯಂತ್ರಿಸುವಲ್ಲಿ ಪುರಸಭೆ ಕಚೇರಿ ಸಿಬ್ಬಂದಿ ಕೂಡ ಕಾರ್ಯ ಪ್ರವೃತ್ತರಾಗಿದ್ದರು. ಇನ್ನು ಅಂಬೇಡ್ಕರ್ ವೃತ್ತ ಸೇರಿ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ 10 ಗಂಟೆ ಬಳಿಕ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರು ಸೇರಿದಂತೆ ಇನ್ನಿತರೆ ವಾಹನ ಸವಾರರಿಗೆಲ್ಲಾ ಮನೆಗಳಿಗೆ ತೆರಳುವಂತೆ ಸೂಚಿಸಿ ಕೆಲವರಿಗೆ ಲಾಠಿ ರುಚಿ ತೋರಿಸಿದರು. ಆದರೆ, ಬ್ಯಾಂಕ್‍ಗಳ ಮುಂದೆ ಎಂದಿನಂತೆ ಜನರು ಗುಂಪುಗುಂಪಾಗಿ ಸೇರಿ ವ್ಯವಹಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂತು.