ಲಾಕ್‍ಡೌನ್‍ನಲ್ಲೂ ಹಳದಿ ಕಲ್ಲಂಗಡಿ ಮಾರಿ ಲಾಭ ಗಳಿಸಿದ ಯುವ ರೈತ

ಕಲಬುರಗಿ,ಜೂ.8: ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಇಲ್ಲೋರ್ವ ಯುವ ರೈತ ತಾನು ಬೆಳೆದ ಹಳದಿ ಕಲ್ಲಂಗಡಿಯನ್ನು ಮಾರಾಟ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ. ಬಸವರಾಜ್ ಪಾಟೀಲ್ ಕೊರಳ್ಳಿ ಎಂಬ ಯುವ ರೈತ ತಾನು ಬೆಳೆದ ಹಳದಿ ಕಲ್ಲಂಗಡಿ ಹಣ್ಣು ಮಾರಾಟಕ್ಕೆ ಹೊಸ ವೇದಿಕೆ ರೂಪಿಸಿಕೊಂಡಿದ್ದಾನೆ.
ಮೂಲತ: ಜಿಲ್ಲೆಯ ಆಳಂದ್ ತಾಲ್ಲೂಕಿನ ಕೊರಳ್ಳಿ ಗ್ರಾಮದವರಾದ ಬಸವರಾಜ್ ಅವರು ಕಳೆದ ನಾಲ್ಕೈದು ತಿಂಗಳ ಹಿಂದೆ ತಮ್ಮದೇ ನಾಲ್ಕು ಎಕರೆ ಜಮೀನಿನಲ್ಲಿ ಜರ್ಮನ್ ತಳಿಯ ಹಳದಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದರು.
ನಾಲ್ಕು ಲಕ್ಷ ರೂ.ಗಳ ಬಂಡವಾಳ ಹಾಕಿ ಕಲ್ಲಂಗಡಿ ಬೆಳೆದ ಮೇಲೆ ಎರಡನೇ ಕೊರೋನಾ ಅಲೆ ಶುರುವಾಗಿ ಸರ್ಕಾರವು ಲಾಕ್‍ಡೌನ್ ವಿಧಿಸಿತ್ತು. ಇದರಿಂದ ಎಲ್ಲ ಹಣ್ಣು, ತರಕಾರಿ ಮಾರುಕಟ್ಟೆಗಳು ಬಂದ್ ಆದ ಕಾರಣ ಬೆಳೆದ ಲಕ್ಷಾಂತರ ರೂ.ಗಳ ಮೌಲ್ಯದ ಕಲ್ಲಂಗಡಿ ಹಣ್ಣನ್ನು ಹೇಗಪ್ಪ ಮಾರಾಟ ಮಾಡೋದು ಎಂದು ತಲೆ ಮೇಲೆ ಕೈಯಿಟ್ಟುಕೊಂಡು ಕುಳಿತಿದ್ದರು. ಆಗ ಯುವ ರೈತನ ತಲೆಯಲ್ಲಿ ಹೊಳೆದಿದ್ದು ಸಾಮಾಜಿಕ ಜಾಲತಾಣ.
ಹಳದಿ ಕಲ್ಲಂಗಡಿ ಹಣ್ಣು ಬೇರೆ ಕಡೆಗೆ ಸಿಗೋದು ವಿರಳ. ಅದಕ್ಕಾಗಿ ಸಾಮಾಜಿಲ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್ ಗ್ರೂಪ್ ಸೇರಿದಂತೆ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಳದಿ ಕಲ್ಲಂಗಡಿ ಹಣ್ಣಿನ ಬಗ್ಗೆ ಭರ್ಜರಿ ಪ್ರಚಾರ ಕೈಗೊಂಡರು. ಅದರಂತೆ ನಿನ್ನೆಯಿಂದ ಎರಡು ಟಂಟಂ ವಾಹನಗಳಲ್ಲಿ ಹಳದಿ ಕಲ್ಲಂಗಡಿ ತಂದು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದಾರೆ. ಒಂದು ಹಳದಿ ಕಲ್ಲಂಗಡಿಗೆ ಐವತ್ತು ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ನಿನ್ನೆಯಿಂದ ಒಟ್ಟು 2000ಕ್ಕೂ ಅಧಿಕ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ.
ಅಂದ ಹಾಗೆ ಜಿಲ್ಲೆಯಲ್ಲಿ ನೂರಾರು ರೈತರು ಸಾವಿರಾರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಲ್ಲಂಗಡಿ ಹಣ್ಣು ಮಾರಾಟವಾಗದ ಕಾರಣ ಬೇಸತ್ತು ಟ್ರ್ಯಾಕ್ಟರ್‍ನಿಂದ ಕಲ್ಲಂಗಡಿ ಬೆಳೆ ನಾಶ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಮಗೆ ಪರಿಹಾರ ಬೇಕೆಂದು ಪ್ರತಿಭಟನೆ ಮಾಡುತ್ತಿರುವ ವಿಚಾರ ಸಾಮಾನ್ಯವಾಗಿದೆ. ಆದಾಗ್ಯೂ, ಈ ಯುವ ಮಾದರಿ ರೈತ ಬಸವರಾಜ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ತಾನು ಬೆಳೆದ ಹಳದಿ ಕಲ್ಲಂಗಡಿ ಬಗ್ಗೆ ಪ್ರಚಾರ ಮಾಡಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವುದು, ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವುದು, ಜೀರ್ಣ ಕ್ರಿಯೆ ವೃದ್ಧಿಸುವುದು, ಕ್ಯಾನ್ಸರ್ ತಡೆಗಟ್ಟುವುದು, ಚರ್ಮ ಸೌಂದರ್ಯ ಹೆಚ್ಚಿಸುವುದು ಸೇರಿದಂತೆ ಆರೋಗ್ಯ ಸಹಕಾರಿಯಾದ ಅಂಶಗಳನ್ನು ಹಳದಿ ಕಲ್ಲಂಗಡಿ ಹಣ್ಣು ಒಳಗೊಂಡಿದೆ.
ಲಾಕ್‍ಡೌನ್‍ನಿಂದ ರಾಜ್ಯದಲ್ಲಿ ಲಕ್ಷಾಂತರ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಆಗದೇ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾದ ಅನೇಕ ಉದಾಹರಣೆಗಳು ದಿನನಿತ್ಯ ಕಾಣಸಿಗುತ್ತಿವೆ. ಆದಾಗ್ಯೂ, ಬಸವರಾಜ್ ತಾನು ಹಾಕಿದ ಬಂಡವಾಳಕ್ಕೆ ಹಣ ಬರದಿದ್ದರೂ ಸಹ ಬಂಡವಾಳ ಹಣ ಮಾತ್ರ ರೈತ ಪಡೆಯುತ್ತಿರುವುದು ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಲ್ಲದೇ ಲಾಕ್‍ಡೌನ್ ಸಂದರ್ಭದಲ್ಲಿ ಸಹ ಕಲ್ಲಂಗಡಿ ಹಣ್ಣು ಮಾರಾಟ ಮಾಡಿ ಲಕ್ಷ, ಲಕ್ಷ ರೂ.ಗಳ ಲಾಭ ಪಡೆಯುತ್ತಿರುವ ರೈತ ಬಸವರಾಜ್ ಅವರ ಕಾರ್ಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.