ಲಾಕ್‍ಡೌನ್‍ನಲ್ಲಿಯೇ ಸುಂದರ ಸಸ್ಯಕಾಶಿ ಸೃಷ್ಟಿ: ಮನೆಯ ಮೇಲೆಯೇ ಕಿಚನ್ ಗಾರ್ಡನ್ ನಿರ್ಮಾಣ

ಕಲಬುರಗಿ:ಏ.18: ಬೇಸಿಗೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನೆತ್ತಿ ಸುಡುವ ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಆದಾಗ್ಯೂ, ಬಿಸಿಲಿನ ಬೇಗೆಯಿಂದ ಹೊರಬರಲು ಸ್ವಲ್ಪ ಸಮಯವನ್ನು ನೀಡಿದರೆ ಸಾಕು ತಂಪಾದ ವಾತಾವರಣವನ್ನು ಸೃಷ್ಟಿಸಿಕೊಳ್ಳಬಹುದು ಎಂದು ನಗರದಲ್ಲಿರುವ ಒಂದು ಕುಟುಂಬ ಸಾಬೀತುಪಡಿಸಿದೆ.
ಮನೆಯನ್ನೇ ಸಸ್ಯಕಾಶಿ ಮಾಡಿಕೊಂಡಿರುವ ಕುಟುಂಬವು ಮನೆಯನ್ನು ತಂಪಾಗಿ ಇಟ್ಟುಕೊಳ್ಳಲು ಮನೆಯ ಮೇಲೆಯೇ ಟೆರಸ್ ಗಾರ್ಡ್‍ನ್ ಮತ್ತು ಕಿಚನ್ ಗಾರ್ಡನ್ ನಿರ್ಮಾಣ ಮಾಡಿದ್ದಾರೆ. ಇನ್ನು ವಿಶೇಷವೆಂದರೆ ಮನೆಗೆ ಬೇಕಾದ ತರಕಾರಿಯನ್ನೂ ಕೂಡ ಅವರೇ ಬೆಳೆಯುತ್ತಿದ್ದಾರೆ.
ನಗರದ ಸಂಗಮೇಶ್ವರ್ ನಗರದಲ್ಲಿರುವ ರಾಮು ಅವರಸಂಗ್ ಅವರ ಮನೆಯ ಮೇಲೆ ಮಿನಿಗಾರ್ಡನ್ ಮತ್ತು ಕಿಚನ್ ಗಾರ್ಡನ್ ನಿರ್ಮಿಸಲಾಗಿದೆ. ತಮ್ಮದೇ ಆದ ಜಾಹೀರಾತು ಏಜೆನ್ಸಿಯನ್ನು ನಡೆಸುವ ರಾಮು ಮತ್ತು ಅವರ ಕುಟುಂಬದವರು ಮನೆಯಲ್ಲಿದ್ದ ಅನೇಕ ನಿರುಪಯೋಗಿ ವಸ್ತುಗಳನ್ನು ಹುಡುಕಿ, ಅವುಗಳನ್ನೇ ಬಳಸಿಕೊಂಡು ಪಾಟ್‍ಗಳನ್ನಾಗಿ ಮಾಡಿದ್ದಾರೆ. ಈ ಪಾಟ್‍ಗಳಲ್ಲಿ ಅನೇಕ ಬಗೆಯ ಅಲಂಕಾರಿಕ ಸಸಿಗಳನ್ನು ಬೆಳಸಿದ್ದು, ಕೆಲವು ಪಾಟ್‍ಗಳು ಮತ್ತು ಬಕೆಟ್‍ಗಳಲ್ಲಿ ಮಣ್ಣು ಹಾಕಿ ವಿವಿಧ ರೀತಿಯ ಹಣ್ಣಿನ ಗಿಡಗಳು, ತರಕಾರಿಯನ್ನು ಬೆಳೆದಿದ್ದಾರೆ. ಟೆರೆಸ್ ಮೇಲೆ ಬೆಳೆದಿರುವ ಕಿಚನ್ ಗಾರ್ಡನ್‍ನಲ್ಲಿ ಟೊಮೆಟ್ಯೋ, ಮೆಣಸಿನಕಾಯಿ, ಬದನೆಕಾಯಿ, ಮೂಲಂಗಿ, ಕರಿಬೇವು, ಪುದಿನಾ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆದಿದ್ದಾರೆ.
ಸಾವಯವ ಪದ್ದತಿಯಲ್ಲಿ ತರಕಾರಿಯನ್ನು ಬೆಳೆದಿದ್ದು, ಅದನ್ನೇ ಮನೆಯ ಅಡಿಗೆಗೆ ಬಳಸುತ್ತಿದ್ದಾರೆ. ಆ ಮೂಲಕ ಕೆಮಿಕಲ್ ಮುಕ್ತ ತಾಜಾ ತರಕಾರಿಯನ್ನು ಮನೆಯಲ್ಲಿಯೇ ಬೆಳೆಯುತ್ತಿದ್ದಾರೆ. ಇನ್ನು ಅನೇಕ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು ಸೇರಿದಂತೆ ಪುಟ್ಟ ಜಾಗದಲ್ಲಿ 150ಕ್ಕೂ ಹೆಚ್ಚು ಬಗೆಯ ಗಿಡಗಳನ್ನು ಬೆಳೆದಿದ್ದಾರೆ. ಮನೆಯ ಮೇಲೆ ಇರುವ ಮೂವತ್ತು ಅಡಿ ಜಾಗದಲ್ಲಿಯೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆದಿರುವುದು ಒಂದು ವಿಶೇಷ.
ಇನ್ನು ನಗರ ಬೆಳೆದಂತೆ ಗಿಡಮರಗಳು ಮಾಯವಾಗುತ್ತಿವೆ. ಹೀಗಾಗಿ ಪಕ್ಷಿಗಳು ನೀರು, ಆಹಾರವಿಲ್ಲದೇ, ಮರಗಿಡಗಳಿಲ್ಲದೇ ತೊಂದರೆ ಅನುಭವಿಸುತ್ತಿವೆ. ಆದಾಘ್ಯೂ, ರಾಮು ಅವರು ಮಾಡಿರುವ ಟೆರಸ್ ಗಾರ್ಡನ್‍ನಿಂದಾಗಿ ಅನೇಕ ಪಕ್ಷಿಗಳು ಟೆರಸ್ ಗಾರ್ಡನ್‍ನತ್ತ ಬರುತ್ತಿವೆ. ಗುಬ್ಬಿ, ಪಾರಿವಾಳ, ಕಾಗೆ ಸೇರಿದಂತೆ ಅನೇಕ ಪಕ್ಷಿಗಳು ಬರುತ್ತಿದ್ದು, ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿ ಸದ್ದನ್ನು ಕೇಳಿ ಮನಸ್ಸಿಗೆ ಆನಂದವಾಗುತ್ತದೆಎಂದು ರಾಮು ಹಾಗೂ ಅವರ ಕುಟುಂಬಸ್ಥರು ಹೇಳುತ್ತಾರೆ.
ಇನ್ನು ಪಕ್ಷಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಟೆರಸ್ ಗಾರ್ಡನ್‍ನಲ್ಲಿ ನೀರು ಮತ್ತು ಕಾಳಿನ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಇನ್ನು ರಾಮು ಅವರು ಮನೆಯ ಟೆರೆಸ್ ಮೇಲೆ ಮಾಡಿರುವ ಮಿನಿ ಗಾರ್ಡನ್ ನೋಡಲು, ನಗರದ ಅನೇಕ ಜನರು ಬರುತ್ತಿದ್ದು, ಕಡಿಮೆ ಜಾಗದಲ್ಲಿ ಕಡಿಮೆ ಹಣ ಖರ್ಚು ಮಾಡಿ, ಹೇಗೆ ಗಿಡಗಳನ್ನು ಬೆಳೆಸಬಹುದು ಎಂಬುದರ ಕುರಿತು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಸಮಯವನ್ನು ಕಳೆಯುವುದು ಹೇಗೆ? ಎನ್ನುವ ಚಿಂತೆ ಪ್ರಾರಂಭವಾದಾಗ ಹೊಳೆದಿದ್ದೆ ಈ ಟೆರಸ್ ಗಾರ್ಡನ್. ಕುಟುಂಬದವರೆಲ್ಲ ಸೇರಿ ಮನೆಯ ಮೇಲೆಯೇ ಅನೇಕ ರೀತಿಯ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ವಿವಿಧ ಬಗೆಯ ತರಕಾರಿ, ಹಣ್ಣಿನ ಗಿಡಗಳು, ಅಲಂಕಾರಿಕ ಗಿಡಗಳನ್ನು ಬೆಳೆದಿದ್ದೇವೆ. ಇದೀಗ ಅವು ಫಲ ನೀಡುತ್ತಿವೆ. ಇದರಿಂದ ಮನೆಯು ಕೂಡ ತಂಪಾಗಿದೆ. ಕಡಿಮೆ ಹಣ ಖರ್ಚು ಮಾಡಿ ಸ್ವಲ್ಪ ಸಮಯವನ್ನು ನೀಡಿದರೆ ಪ್ರತಿಯೊಬ್ಬರೂ ತಮ್ಮ ಮನೆಯನ್ನು ಸಸ್ಯ ಕಾಶಿ ಮಾಡಿಕೊಳ್ಳಬಹುದು ಎಂದು ರಾಮು ಅವರು ಹೇಳಿದ್ದಾರೆ.