ಲಾಕ್‌ಡೌನ್ 23ರಂದು ತೀರ್ಮಾನ

ಬೆಂಗಳೂರು,ಮೇ ೧೯- ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಈ ತಿಂಗಳ ೨೩ ರಂದು ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಲಾಕ್‌ಡೌನ್ ಸಂತ್ರಸ್ಥರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಪ್ರಕಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳ ೨೪ರವರೆಗೂ ಲಾಕ್‌ಡೌನ್ ಜಾರಿಯಲ್ಲಿರುತ್ತದೆ.ಲಾಕ್‌ಡೌನ್ ವಿಸ್ತರಣೆ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ. ಮೇ ೨೩ ರಂದು ತೀರ್ಮಾನ ಮಾಡುತ್ತೇವೆ ಎಂದರು.
ವಿಶೇಷ ಯೋಜನೆ
ಕೋವಿಡ್ ಕಾರಣದಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳ ಪೋಷಣೆಗೆ ಸರ್ಕಾರ ಇನ್ನೆರೆಡು ಮೂರು ದಿನಗಳಲ್ಲಿ ಯೋಜನೆಯನ್ನು ಪ್ರಕಟಿಸಲಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಜತೆ ಚರ್ಚೆ ನಡೆಸಿರುವುದಾಗಿ ಅವರು ಹೇಳಿದರು.
ಕೋವಿಡ್ ಚಿಕಿತ್ಸೆಗೆ ಅನುಕೂಲವಾಗಲು ೨,೧೫೦ ವೈದ್ಯರನ್ನು ೩ ದಿನಗಳೊಳಗಾಗಿ ನೇಮಕ ಮಾಡಲಾಗುವುದು. ೧೮ ರಿಂದ ೪೮ ವರ್ಷಒಳಗಿನ ಎಲ್ಲರಿಗೆ ಉಚಿತ ಲಸಿಕೆ ನೀಡಲು ಸಾವಿರ ಕೋಟಿ ರೂ. ವೆಚ್ಚದಲ್ಲಿ ೩ ಕೋಟಿ ಡೋಸ್ ಲಸಿಕೆ ಖರೀದಿಗೆ ಆದೇಶ ನೀಡಲಾಗಿದೆ ಎಂದರು.
ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳಿಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದ ನಿಯೋಜಿಸಿದ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ೧ನೇ ಮತ್ತು ೨ನೇ ಅಲೆಯಲ್ಲಿ ಇದುವರೆಗೂ ೨.೦೬ ಲಕ್ಷ ಸೋಂಕಿತರಿಗೆ ೯೫೬ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು,