ಲಾಕ್‌ಡೌನ್ ಹಿನ್ನೆಲೆ: ಮಂಗಳೂರಿನಿಂದ ಊರಿಗೆ ಹೊರಟ ವಲಸೆ ಕಾರ್ಮಿಕರು

ಮಂಗಳೂರು, ಎ.೨೮- ಈಗಾಗಲೇ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಬೆಂಗಳೂರು ಸೇರಿದಂತೆ ಹಲವು ನಗರಗಳಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳಿದಿದ್ದಾರೆ. ಅದರಂತೆ ನಿನ್ನೆ ಮಂಗಳೂರಿನಲ್ಲಿ ಕೂಡ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ನಗರದ ರೈಲು ನಿಲ್ದಾಣ ಮತ್ತು ಬಿಜೈ ಸರಕಾರಿ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ತವರೂರಿನತ್ತ ತೆರಳಿದ್ದಾರೆ. ಮಂಗಳವಾರ ಬೆಳಗ್ಗಿನಿಂದ ಸಂಜೆಯವರೆಗೂ ಬಸ್ ಮತ್ತು ರೈಲು ನಿಲ್ದಾಣಗಳತ್ತ ಕಾರ್ಮಿಕರು ಹೆಜ್ಜೆ ಹಾಕುತ್ತಿದ್ದುದು ಕಂಡು ಬಂತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದ.ಕ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಅವರು, ಕಟ್ಟಡ ನಿರ್ಮಾಣ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ. ಕೋವಿಡ್-೧೯ ನಿಯಮ ಪಾಲಿಸಿ ಕಾಮಗಾರಿ ಮಾಡಬಹುದಾಗಿದೆ. ಈಗಾಗಲೆ ನಾವು ಕ್ರೆಡೈ, ಬಿಲ್ಡರ್ಸ್ ಅಸೋಸಿಯೇಶನ್, ಕೈಗಾರಿಕೋದ್ಯಮಿಗಳ ಸಭೆ ಕರೆದು ಕಾರ್ಮಿಕರ ಬಗ್ಗೆ ಅದರಲ್ಲೂ ವಲಸೆ ಕಾರ್ಮಿಕರ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದೇವೆ. ಸಾಧ್ಯವಾದರೆ ಕಾಮಗಾರಿ ನಡೆಯುವ ಸ್ಥಳದಲ್ಲೇ ವಸತಿ, ಆಹಾರದ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ. ಜಿಲ್ಲೆಯಿಂದ ಯಾರೂ ವಲಸೆ ಕಾರ್ಮಿಕರು ತವರೂರಿನತ್ತ ಹೊರಟು ಹೋದ ಬಗ್ಗೆ ನಮಗೆ ಯಾವುದೇ ಮಾಹಿತಿ ಅಥವಾ ದೂರು ಬಂದಿಲ್ಲ. ಈಗಾಗಲೆ ಕೇಂದ್ರ ಕಾರ್ಮಿಕ ಇಲಾಖೆಯು ಈ ಬಗ್ಗೆ ನಮ್ಮಿಂದ ವರದಿಯನ್ನೂ ಕೇಳಿದೆ. ಆದರೆ, ಜಿಲ್ಲೆಯಿಂದ ಯಾರೂ ವಲಸ ಹೊರಟು ಹೋದ ಬಗ್ಗೆ ತಿಳಿದಿಲ್ಲ ಎಂದು ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ ತಿಳಿಸಿದ್ದಾರೆ.