ಲಾಕ್‌ಡೌನ್ ಹಂತಹಂತವಾಗಿ ಸಡಿಲ

ಬೆಂಗಳೂರು, ಮೇ ೩೧- ಕೋವಿಡ್ ಸಂಬಂಧ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಾಣುತ್ತಿರುವ ಹಿನ್ನೆಲೆ ಜೂ.೭ರ ಬಳಿಕ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಅನ್ನು ಸಡಿಲಿಕೆ ಮಾಡುವುದಾದರೆ, ಹಂತ ಹಂತವಾಗಿ ಮಾಡಬೇಕು. ಆಗ ಮಾತ್ರ ಕೋವಿಡ್ ನಿಯಂತ್ರಣದಲ್ಲಿರುತ್ತದೆ. ಈ ಸಂಬಂಧ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾಮಾನ್ಯ ಜೀವನಕ್ಕೆ ನಾವು ಮರಳಿ ಹೋಗಬೇಕು. ಜೊತೆಗೆ, ಸಾಮಾನ್ಯ ದಿನಗಳು ನಮಗೆ ವಾಪಸ್ಸು ಬರಬೇಕು.ಆದರೆ, ಇವು ಹಂತ ಹಂತವಾಗಿ ನಡೆಯಬೇಕಾಗಿದೆ ಎಂದ ಅವರು, ಈ ಹಿಂದಿನ ಆನ್‌ಲಾಕ್ ಮಾದರಿಯಲ್ಲಿಯೇ ಕೊಂಚ ಮಟ್ಟಿಗೆ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ತೀರ ಕಡಿಮೆಯಾಗುತ್ತಿದೆ.ಆದರೆ,ಬಿಬಿಎಂಪಿಯ ಕಾರ್ಯ ವೈಖರಿ ಮುಂದುವರೆದಿದ್ದು,ಆಯಾ ವಾರ್ಡ್‌ವಾರು ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿಯೇ ಸೋಂಕಿತರ ಮೇಲೆ ನಿಗಾವಹಿಸಲಾಗುವುದು.ಜತೆಗೆ, ಲಸಿಕೆ ಹಾಕಿಸುವಿಕೆಮ ಪರಿಣಾಮ ಪ್ರಮಾಣವೂ ಅಧಿಕಗೊಳಿಸಲಾಗುವುದು ಎಂದು ವಿವರಿಸಿದರು.
ಈ ಹಿಂದೆ ಬೆಂಗಳೂರಿನಲ್ಲಿ ೨೫-೩೦ ಸಾವಿರದವರೆಗೂ ಏರಿಕೆಯಾಗಿದ್ದ ದೈನಂದಿನ ಹೊಸ ಸೋಂಕು ಪ್ರಕರಣಗಳ ಪ್ರಮಾಣ ಇದೀಗ ಗಣನೀಯವಾಗಿ ಇಳಿಕೆಯಾಗಿದೆ. ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವುದು ಉತ್ತಮ ಸಂಕೇತಾದರೂ, ಪ್ರಸ್ತುತ ಲಾಕ್‌ಡೌನ್ ಜಾರಿಯಲ್ಲಿದೆ.
ಲಾಕ್‌ಡೌನ್ ತೆರವುಗೊಳಿಸಿದ ಬಳಿಕವೂ ಸೋಂಕಿನ ಪ್ರಮಾಣ ಹೆಚ್ಚಾಗದಂತೆ ತಡೆಯಲು ಜನರಲ್ಲಿ ಸ್ವಯಂ ಶಿಸ್ತು ಮೂಡಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಕೋವಿಡ್ ಸಾಂಕ್ರಾಮಿಕವನ್ನು ತಡೆಗಟ್ಟ ಬಹುದು ಎಂದು ಗುಪ್ತ ಹೇಳಿದರು.