ಲಾಕ್‌ಡೌನ್ ವಿಸ್ತರಣೆ ನಾಳೆ ತೀರ್ಮಾನ

ಬೆಂಗಳೂರು, ಮೇ ೨೧- ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಗ್ಗೆ ನಾಳೆ ನಡೆಯುವ ಸಚಿವರುಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾತ್ರಿ ಮತ್ತು ನಾಳೆ ಸಚಿವರುಗಳ ಸಭೆ ಇದೆ. ಈ ಸಭೆಯಲ್ಲಿ ಲಾಕ್‌ಡೌನ್ ವಿಸ್ತರಿಸಬೇಕೋ ಬೇಡವೋ ಎಂಬ ಬಗ್ಗೆ ಎಲ್ಲ ಸಚಿವರ ಜತೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವುದಾಗಿ ಹೇಳಿದರು.
ರಾಜ್ಯದ ಕೊರೊನಾ ಸ್ಥಿತಿಗತಿಯ ಬಗ್ಗೆ ಎಲ್ಲ ಜಿಲ್ಲೆಗಳಿಂದ ಸಂಜೆಯ ವೇಳೆಗೆ ಸಂಪೂರ್ಣ ಮಾಹಿತಿ ಬರಲಿದೆ. ಈ ಮಾಹಿತಿಯಾಧರಿಸಿ ಲಾಕ್‌ಡೌನ್ ವಿಸ್ತರಣೆಯ ತೀರ್ಮಾನ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಕೊರೊನಾ ನಿಗ್ರಹಕ್ಕೆ ರಾಜ್ಯ ಸರ್ಕಾರ ಈ ತಿಂಗಲ ೨೪ರವರೆಗೂ ಲಾಕ್‌ಡೌನ್ ಘೋಷಿಸಿದೆ. ಸೋಂಕು ನಿಗ್ರಹಕ್ಕೆ ಲಾಕ್‌ಡೌನ್‌ನ್ನು ವಿಸ್ತರಿಸಬೇಕು ಎಂಬ ಒತ್ತಡಗಳು ಇದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ತೀರ್ಮಾನಕ್ಕೆ ಎಲ್ಲವನ್ನೂ ಬಿಡಲಾಗಿದೆ.
ಸರ್ಕಾರದ ಉನ್ನತ ಮೂಲಗಳ ಪ್ರಕಾರ ಲಾಕ್‌ಡೌನ್ ಒಂದು ವಾರಗಳ ಕಾಲ ಅಂದರೆ ಮೇ ೩೧ರವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ನಾಳೆ ನಡೆಯುವ ಸಚಿವರ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗುವುದು ನಿಶ್ಚಿತ ಎನ್ನಲಾಗಿದೆ.