ಲಾಕ್‌ಡೌನ್ ವಿಸ್ತರಣೆ ಇನ್ನೂ ತೀರ್ಮಾನಿಸಿಲ್ಲ; ಬಿಎಸ್‌ವೈ

ಬೆಂಗಳೂರು,ಮೇ ೧೭- ಲಾಕ್‌ಡೌನ್ ವಿಸ್ತರಣೆ ಬಗ್ಗೆಯಾಗಲಿ, ಬಡವರಿಗೆ ಪರಿಹಾರ ಪ್ಯಾಕೇಜ್ ನೀಡುವ ಬಗ್ಗೆಯಾಗಲಿ ಸದ್ಯಕ್ಕೆ ನಿಶ್ಚಯ ಮಾಡಿಲ್ಲ. ಮುಂದೆ ಎಲ್ಲರೊಡನೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ನಗರದ ಕೆಂಗೇರಿ ಉಪನಗರದಲ್ಲಿ ಆರಂಭಿಸಲಾಗಿರುವ ಕೋವಿಡ್ ನಿರ್ಧಾರ (ಟ್ರಯಾಜ್)ಕೇಂದ್ರ ಉದ್ಘಾಟಿಸಿ ಬಿಜಿಎಸ್ ಆಸ್ಪತ್ರೆಯ ೨೧೦ ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳು, ೪೩ ಐಸಿಯು ಹಾಸಿಗೆಗಳು, ೩೦ ಹೆಚ್‌ಡಿಯು ಹಾಸಿಗೆಗಳು ಹಾಗೂ ೧೦೦ ಮಾನ್ಯ ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಮೈಸೂರಿನ ಹಸಿರು ಪ್ರತಿಷ್ಠಾನದ ೨ ಸಾವಿರ ಸಸಿಗಳನ್ನು ಆದಿಚುಂಚನಗಿರಿ ಮಠಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಸದಸಯಕ್ಕೆ ಲಾಕ್‌ಡೌನ್ ವಿಸ್ತರಣೆಯಾಗಲಿ, ಪರಿಹಾರ
ಪ್ಯಾಕೇಜ್ ಬಗ್ಗೆ ಯಾಗಲಿ ನಿಶ್ವಯಿಸಿಲ್ಲ ಬೇರೆ ಸಂದರ್ಭದಲ್ಲಿ ಚರ್ಚೆ ಮಾಡಿ ತಿಳಿಸುತ್ತೇನೆ ಎಂದರು.
ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಟ್ರಯಾಜ್ ಕೇಂದ್ರಗಳ ಪಾತ್ರ ಮಹತ್ವದ್ದು, ಯಾರಿಗೆ ಆಸ್ಪತ್ರೆ ಬೇಕು, ಯಾರಿಗೆ ಆಮ್ಲಜನಕ ಸೇವೆ ನೀಡಬೇಕು, ಯಾರನ್ನು ಕೋವಿಡ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಬೇಕು ಈ ಟ್ರಯಾಜ್ ಕೇಂದ್ರದಲ್ಲಿ ತೀರ್ಮಾನಿಸಲಾಗುತ್ತದೆ. ಇದರಿಂದ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗಲಿದೆ ಎಂದರು.
ಈ ಕೇಂದ್ರಗಳು ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ, ಉಪಕರಣಗಳನ್ನು ಹೊಂದಿವೆ. ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಆದಿಚುಂಚನಗಿರಿ ಮಠ ಕೋವಿಡ್ ನಿಯಂತ್ರಣಕ್ಕೆ ನೀಡುತ್ತಿರುವ ಸಹಕಾರ ಎಲ್ಲರಿಗೂ ಮಾದರಿ. ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾನವೀಯ ಕಳಕಳಿಯಿಂದ ಕೋವಿಡ್ ಸೋಂಕಿತರಿಗೆ ನೆರವಾಗುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬಡವರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಬಿಜಿಎಸ್ ಆಸ್ಪತ್ರೆ, ಕೋವಿಡ್ ಸೋಂಕಿತರಿಗೂ ಚಿಕಿತ್ಸೆಗೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಶ್ರೀಮಠ ಮೊದಲಿನಿಂದಲೂ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.
ಪರಿಸರ ಸಂರಕ್ಷಣೆಗಾಗಿ ಶ್ರೀಮಠ ಲಕ್ಷ ವೃಕ್ಷ ಅಭಿಯಾನನವನ್ನು ನಡೆಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ, ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.