ಲಾಕ್‌ಡೌನ್ ಮುಂದುವರಿಕೆ ಅನಿವಾರ್ಯ; ಹೆಚ್‌ಡಿಕೆ


ಬೆಂಗಳೂರು,ಮೇ ೧೮- ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರೆಸುವುದು ಅನಿವಾರ್ಯ. ಇನ್ನು ಒಂದು ತಿಂಗಳ ಕಾಲ ಲಾಕ್‌ಡೌನ್ ಮುಂದುವರೆಸಿ ಕೊರೊನಾದ ಸಾವು-ನೋವುಗಳನ್ನು ತಡೆಯುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಲಾಕ್‌ಡೌನ್ ವಿಸ್ತರಣೆಯ ಜತೆಗೆ ಬಡವರು ಮತ್ತು ಶ್ರಮಿಕ ವರ್ಗದವರಿಗೆ ಆರ್ಥಿಕ ಪ್ಯಾಕೇಜ್‌ನ್ನು ಸರ್ಕಾರ ಘೋಷಿಸಬೇಕು. ಜನರ ಜೀವದ ಜತೆಗೆ ಜೀವನವು ಮುಖ್ಯ. ಆರ್ಥಿಕ ಪ್ಯಾಕೇಜ್‌ಗೆ ಹಣ ಒದಗಿಸುವುದು ಸರ್ಕಾರಕ್ಕೆ ದೊಡ್ಡ ವಿಚಾರವೇನಲ್ಲ. ಕೂಡಲೇ ಆರ್ಥಿಕ ನೆರವನ್ನು ಘೋಷಿಸಬೇಕು ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ನಿನ್ನೆ ಮತ್ತು ಇಂದು ರಾಜ್ಯದ ಜೆಡಿಎಸ್ ಶಾಸಕರು ಹಾಗೂ ಮುಖಂಡರ ಜತೆ ವೀಡಿಯೊ ಸಂವಾದ ನಡೆಸಿದ್ದೇನೆ. ಎಲ್ಲೆಡೆ ಕೊರೊನಾ ಪರಿಸ್ಥಿತಿ ಕೆಟ್ಟದಿದೆ. ಜನರ ಜೀವದ ಜತೆ ಚೆಲ್ಲಾಟ ಆಡುವುದು ಬೇಡ. ಲಾಕ್‌ಡೌನ್ ಮುಂದುವರೆಸಿ ಎಂದರು.
ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಜ್ಯದ ಹಲವೆಡೆ ಕೊರೊನಾ ಪರೀಕ್ಷೆಯನ್ನು ಸ್ಥಗಿತಗೊಳಿಸಿರುವ ಮಾಹಿತಿ ಇದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಮುಂದೆ ಅನಾಹುತಕ್ಕೆ ಇದು ಕಾರಣವಾಗುತ್ತದೆ. ಎಲ್ಲಡೆ ಕೊರೊನಾ ಪರೀಕ್ಷೆಗಳನ್ನು ಹೆಚ್ಚು ಮಾಡಿ, ಸೋಂಕಿತರನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಿ ಸೋಂಕು ತಡೆಗಟ್ಟುವಂತ ಒತ್ತಾಯಿಸಿದರು.
ಕೊರೊನಾ ವಿಚಾರದಲ್ಲಿ ಸರ್ಕಾರಕ್ಕೆ ಹಲವು ಗುಣಾತ್ಮಕ ಸಲಹೆಗಳನ್ನು ನೀಡಿದ್ದೆ. ಆದರೆ ಅದನ್ನು ಸರ್ಕಾರ ಪಾಲಿಸಲಿಲ್ಲ. ಮಾರ್ಚ್ ೧೫ ರಂದೇ ಲಾಕ್‌ಡೌನ್ ಜಾರಿ ಮಾಡುವಂತೆ ಹೇಳಿದ್ದೆ. ಅದಾಗಿದ್ದರೆ ರಾಜ್ಯದಲ್ಲಿ ಕೊರೊನಾ ಇಷ್ಟೊಂದು ಭೀಕರವಾಗುತ್ತಿರಲಿಲ್ಲ. ಸಾವು-ನೋವು ಸಂಭವಿಸುತ್ತಿರಲಿಲ್ಲ ಎಂದರು.
ಕಾಂಗ್ರೆಸ್ ರಾಜಕಾರಣ
ಕೊರೊನಾ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಅವರು, ಲಸಿಕೆಗೆ ೧೦೦ ಕೋಟಿ ರೂ. ನೀಡುವುದಾಗಿ ಹೇಳಿದೆ. ಇದನ್ನು ಅವರ ಮನೆಯಿಂದ ತಂದುಕೊಡಲ್ಲ. ಕ್ಷೇತ್ರಾಭಿವೃದ್ಧಿ ನಿಧಿಯಿಂದ ೧೦೦ ಕೋಟಿ ನೀಡುತ್ತಿದ್ದಾರೆ. ಇದರಲ್ಲಿ ಹೆಚ್ಚುಗಾರಿಕೆ ಏನಿದೆ ಎಂದರು.
ಈ ಹಿಂದೆಲಸಿಕೆ ಬಂದಾಗ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿ ಇದು ಕೊರೊನಾ ಲಸಿಕೆಯೇ ಅಲ್ಲ. ಡಿಸ್ಟಿಲ್ ವಾಟರ್ ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದ್ದೇ ಲಸಿಕೆ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುವಂತಾಯಿತು. ಕಾಂಗ್ರೆಸ್‌ನ ಅಪಪ್ರಚಾರವೇ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಟೀಕಿಸಿದರು.
ಲಸಿಕೆ ಬಂದಾಗ ಉತ್ಪಾದಕರು ದೇಶದಲ್ಲಿ ಬೇಡಿಕೆ ಇಲ್ಲದ ಕಾರಣ ಅದನ್ನು ವಿದೇಶಕ್ಕೆ ಕಳುಹಿಸಿದರು. ಕಾಂಗ್ರೆಸ್‌ನವರು ದಾರಿ ತಪ್ಪಿಸದಿದ್ದರೆ ಎಲ್ಲರಿಗೂ ಲಸಿಕೆ ಸಿಗುತ್ತಿತ್ತು. ಕಾಂಗ್ರೆಸ್ ಅಪಪ್ರಚಾರದಿಂದಲೇ ಜನ ಲಸಿಕೆ ಹಾಕಿಸಿಕೊಳ್ಳದೆ ಸಂಕಷ್ಟಕ್ಕೆ ಸಿಲುಕಿದರು. ಈಗ ಕಾಂಗ್ರೆಸ್‌ನ ಮಹಾನ್ ನಾಯಕರು ಲಸಿಕೆಗಾಗಿ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.