ಲಾಕ್‌ಡೌನ್ ಭೀತಿ ಕಾರ್ಮಿಕರಲ್ಲಿ ಆತಂಕ

ಬೆಂಗಳೂರು,ಏ.೧೯- ದೇಶದಲ್ಲಿ ಒಂದು ಕಡೆ ಸೋಂಕು ಹೆಚ್ಚಳ ಗಣನೀಯವಾಗಿ ಹೆಚ್ಚಳವಾಗುತ್ತಿದೆ.ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಂಕು ಏರಿಕೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಇಲ್ಲದೇ ಸೋಂಕು ನಿಯಂತ್ರಿಸಲು ಕಠಿಣ ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ.
ಒಂದು ವೇಳೆ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದರೆ ಅಸಂಖ್ಯಾತ ಅಸಂಘಟಿತ ಕಾರ್ಮಿಕರು,ಸಣ್ಣ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು,ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಬೀದಿ ವ್ಯಾಪಾರಿಗಳ ಬದುಕು ಬೀದಿಗೆ ಬರಲಿದೆ ಎನ್ನುವ ಆತಂಕ ಈ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಮನೆ ಮಾಡಿದೆ.
ರಾಜ್ಯದಲ್ಲಿ ಕಳೆದ ವರ್ಷ ಜಾರಿ ಮಾಡಿದ ಲಾಕ್‌ಡೌನ್ ನಿಂದ ತತ್ತರಿಸಿ ಹೋಗಿರುವ ಅಸಂಘಟಿತ ವಲಯದ ಕಾರ್ಮಿಕರು, ಬೀದಿ ವ್ಯಾಪಾರಿಗಳು ಮತ್ತು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ನಿತ್ಯದ ಆದಾಯದ ಮೇಲೆ ಬದುಕು ಸಾಗಿಸುತ್ತಿರುವ ಜನರ ಬದುಕು ಹೇಳತೀರಲಾಗದು ಎನ್ನುವ ಆತಂಕ ಎದುರಾಗಿದೆ.
ಲಾಕ್ ಡೌನ್ ನಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಮತ್ತೆ ಲಾಕ್‌ಡೌನ್ ಊಹೆಯೂ ಮಾಡಿಕೊಳ್ಳಲು ಆಗುವುದಿಲ್ಲ.ಇದರಿಂದ ಜನರ ಬದುಕು ಅಕ್ಷರಷಃ ನರಕಯಾತನೆ ಆಗಲಿದೆ ಎನ್ನುವ ಮಾತುಗಳೂ ಕೂಡ ಈಗಾಗಲೇ ಕೇಳಿ ಬಂದಿದೆ.
ಲಾಕ್ ಡೌನ್ ಗೆ ವಿರೋಧ:
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಗಾರ್ಮೆಂಟ್ ಮತ್ತು ಟೆಕ್ಸ್ ಟೈಲ್ ಕಾರ್ಮಿಕರ ಸಂಘಟನೆಯ ಅಧ್ಯಕ್ಷೆ ಪ್ರತಿಭಾ ಪ್ರತಿಕ್ರಿಯಿಸಿ, ಕಾರ್ಮಿಕ ಸಂಘಟನೆಗಳು ಲಾಕ್‌ಡೌನ್ ಗೆ ಸಂಪೂರ್ಣ ವಿರೋಧವಿದೆ ಎಂದು ಅವರು ತಿಳಿಸಿದ್ದಾರೆ. ಗಾರ್ಮೆಂಟ್‌ಗಳಲ್ಲಿ ೪ ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ.ಇವರ ಪೈಕಿ ಶೇ.೮೫ ರಷ್ಟು ಮಹಿಳೆಯರೇ ಇದ್ದಾರೆ. ಪ್ರತಿ ತಿಂಗಳು ೮ ಸಾವಿರ ರೂಪಾಯಿ ಗಳಿಸುತ್ತಿದ್ದು ಅದರಲ್ಲಿ ಅವರಿಗೆ ಯಾವುದೇ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ನಿತ್ಯದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಈಗಾಗಲೇ ೧೦ ಸಾವಿರ ಗಾರ್ಮೆಂಟ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಸರ್ಕಾರ ಲಾಕ್‌ಡೌನ್ ಮಾಡಿದರೆ ಇನ್ನಷ್ಟು ಮಂದಿ ಕೆಲಸ ಕಳೆದುಕೊಳ್ಳುತ್ತಾರೆ.ಹೀಗಾಗಿ ವಿರೋಧವಿದೆ ಎಂದು ತಿಳಿಸಿದ್ದಾರೆ.
ವಲಸೆ ಕಾರ್ಮಿಕರು ಸಂಕಷ್ಟಕ್ಕೆ:
ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಮಾಡಿದರೆ ವಲಸೆ ಕಾರ್ಮಿಕರು ಹೆಚ್ಚು ಸಮಸ್ಯೆಗೆ ಸಿಲುಕುತ್ತಾರೆ ಎಂದು ವಲಸೆ ಕಾರ್ಮಿಕ ಸಂಘದ ಅಧ್ಯಕ್ಷ ಮಂಜುನಾಥ್ ಕುಂಬ್ಳೆ ಹೇಳಿದ್ದಾರೆ.ಕಟ್ಟಡ ನಿರ್ಮಾಣ ಕೆಲಸಗಾರರು ಈಗಾಗಲೇ ನಗರ ಬಿಟ್ಟು ತೆರಳಿದ್ದಾರೆ. ಕಳೆದ ಭಾರಿ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ತಲಾ ಐದು ಸಾವಿರ ರೂಪಾಯಿ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಶೇ.೮೦ ರಷ್ಟು ವಲಸೆ ಕಾರ್ಮಿಕರಿಗೆ ಈ ಸೌಲಭ್ಯ ಸಿಕ್ಕಿಲ್ಲ ಎಂದರು.
ಲಕ್ಷಾಂತರ ಬೀದಿ ವ್ಯಾಪಾರಿಗಳು ಕೆಲಸ ಕಳೆದುಕೊಂಡು ಬೀದಿಗೆ ಬರಲಿದ್ದಾರೆ ಎನ್ನುವ ಆತಂಕವನ್ನು ಅವರು ಹೊರ ಹಾಕಿದ್ದಾರೆ.