ಲಾಕ್‌ಡೌನ್ ಬೇಡವೆ ಎಚ್ಚರ ವಹಿಸಿ: ಸುಧಾಕರ್

ಬೆಂಗಳೂರು,ಏ.೬- ಕೊರೊನಾ ಸೋಂಕು ತಡೆಗೆ ಸರ್ಕಾರ ಜಾರಿಗೊಳಿಸಿರುವ ಕಠಿಣ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಎದುರಾಗಲಿದ್ದು, ಲಾಕ್‌ಡೌನ್ ಅಥವಾ ಕರ್ಫ್ಯೂ ಬೇಡವೆಂದರೆ ಜನರೇ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಗತ್ಯ ಗುಂಪುಗೂಡುವುದನ್ನು ನಿಲ್ಲಿಸಬೇಕು. ಜನರಲ್ಲಿ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಸೋಂಕಿನ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಸುಧಾರಣೆ ಕಂಡುಬರುತ್ತಿಲ್ಲ. ಇದೇ ರೀತಿ ಮುಂದುವರೆದರೆ ಲಾಕ್‌ಡೌನ್ ಅನಿವಾರ್ಯ ಎಂಬ ಪರೋಕ್ಷ ಸುಳಿವು ನೀಡಿದ್ದಾರೆ.
ನಿನ್ನೆಯವರೆಗೆ ರಾಜ್ಯದಲ್ಲಿ ೪೮.೫೦ ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ತ್ವರಿತವಾಗಿ ಲಸಿಕೆ ವಿತರಿಸುವ ಪಟ್ಟಿಯಲ್ಲಿ ರಾಜ್ಯಕ್ಕೆ ೬ನೇ ಸ್ಥಾನವಿದೆ. ಕೇಂದ್ರ ಆರೋಗ್ಯ ಸಚಿವರು ರಾಜ್ಯಕ್ಕೆ ೧೫ ಲಕ್ಷ ಲಸಿಕೆ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ದೇಶದಲ್ಲೇ ೧ ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ೩೨ ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನಿರ್ದಿಷ್ಟ ಕಾರಣ ತಿಳಿದುಕೊಳ್ಳಲು ಅಧ್ಯಯನ ನಡೆಸುವಂತೆ ತಜ್ಞರಿಗೆ ಸೂಚಿಸಲಾಗಿದೆ ಎಂದರು.
ಇದುವರೆಗೂ ೩೩ ಸಾವಿರ ಹಾಸಿಗೆಗಳನ್ನು ಸಿದ್ಧ ಮಾಡಿದ್ದೇವೆ. ಈ ಪೈಕಿ ೧೦,೦೮೩ ಆಮ್ಲಜನಕ ಬೆಡ್‌ಗಳೂ ಸೇರಿವೆ. ಸೋಂಕುಪೀಡಿತರಿಗಾಗಿ ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.