ಲಾಕ್‌ಡೌನ್ ಪ್ರಸ್ತಾಪ ಇಲ್ಲ:ಅಶೋಕ್

ಹುಬ್ಬಳ್ಳಿ ಮಾ.೨೧: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಸೋಂಕು ತಡೆಗೆ ಲಾಕ್‌ಡೌನ್ ಜಾರಿ ಮಾಡುವ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಕೊರೊನಾ ತಡೆಗೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.ಸರ್ಕಾರದ ಮುಂದೆ ಲಾಕ್ ಡೌನ್ ಪ್ರಸ್ತಾವ ಇಲ್ಲ. ಮುಂದಿನ ಹತ್ತುದಿನ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನಪ್ರತಿನಿಧಿಗಳು, ಅಧಿಕಾರಿಗಳು ಮೇಲಿನಿಂದ ಧರೆ ಇಳಿದು ಬಂದವರಲ್ಲ. ಜನರು ಮಂತ್ರಿಗಳು, ಡಿ ಸಿ ಹಾಗೂ ಎ ಸಿ ಯವರನ್ನು ಭೇಟಿಯಾಗಿ ಅಹವಾಲು ಹೇಳಿಕೊಳ್ಳಲು ಮುಜುಗುರ ಪಟ್ಟುಕೊಳ್ಳುತ್ತಾರೆ. ಈ ಭಾವನೆ ಹಾಗೂ ಜನಸಾಮಾನ್ಯರ ನಡುವಿನ ಕಂದಕ ಮುಚ್ಚಿ, ಸೇತುವೆ ನಿರ್ಮಿಸುವಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಛಭ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಸಚಿವರು ಮುಂಜಾನೆ ಎದ್ದು ದಿನ ಪತ್ರಿಕೆಗಳನ್ನು ಓದಿ, ನಂತರ ಗ್ರಾಮದ ಹಿರೆಕೆರೆ ಏರಿ ಮೇಲೆ ವಾಯುವಿಹಾರ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಜನರಿಗೆ ಅಧಿಕಾರಿಗಳು ನಮ್ಮವರು ಎನಿಸಬೇಕು, ಹಾಗೇ ಅಧಿಕಾರಿಗಳಿಗೆ ಜನರು ನಮ್ಮವರು ಎಂದೆನಿಸಬೇಕು. ಪಟ್ಟಣ ಪ್ರದೇಶದಿಂದ ಅಭಿವೃದ್ಧಿಯಿಂದ ಮಾತ್ರ ದೇಶ ಉದ್ಧಾರವಾಗುವುದಿಲ್ಲ. ಮಹಾತ್ಮಾ ಗಾಂಧಿಜೀಯವರ ಆಶಯದಂತೆ ಹಳ್ಳಿಗಳು ಉದ್ಧಾರವಾಗಬೇಕು. ಸರ್ಕಾರ ಹಳ್ಳಿಗಳ ಉದ್ಧಾರಕ್ಕೆ ನೂರು ಕಾರ್ಯಕ್ರಮ ಜಾರಿ ಮಾಡಿದರು, ಜನರಿಗೆ ಹತ್ತು ಕಾರ್ಯಕ್ರಮಗಳ ಬಗ್ಗೆ ಅರಿವು ಇರುವುದಿಲ್ಲ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅವುಗಳನ್ನು ಅನುಷ್ಠಾನಗೊಳಿಸಲು ಗ್ರಾಮವಾಸ್ತವ್ಯ ನೆರವಾಗುವುದು. ಇದರಿಂದ ಸರ್ಕಾರದ ಮೇಲೆ ವಿಶ್ವಾಸ ಮೂಡುವುದು. ರಾಜ್ಯದ ೨೭೦ ಕಡೆ ಗ್ರಾಮ ವಾಸ್ತವ್ಯ ನಡೆಯುತ್ತದೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ತಹಶೀಲ್ದಾರರು ತಮ್ಮ ಹಂತದಲ್ಲಿ ಗ್ರಾಮವಾಸ್ತವ್ಯ ಹೂಡಿದ್ದಾರೆ. ಮೂರನೇ ಶನಿವಾರದಂದು ಕಂದಾಯ ಇಲಾಖೆ ಕಚೇರಿಗಳು ಖಾಲಿಯಿರುತ್ತವೆ. ಕ್ಲರ್ಕ್‌ಗಳು ಮಾತ್ರ ಇರುತ್ತಾರೆ. ಇದರೊಂದಿಗೆ ಪರಿವರ್ತನೆ ಆರಂಭವಾಗಿದೆ. ಕಾರ್ಯಕ್ರಮ ಜನರನ್ನು ತಲುಪುತ್ತದೆ. ವಿರೋಧ ಪಕ್ಷದ ಶಾಸಕರು ಪಾಲ್ಗೊಳ್ಳುವಂತೆ ಕರೆ ನೀಡಿದರು.
ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ನನ್ನನ್ನು ಭವ್ಯ ಮೆರವಣಿಗೆಯೊಂದಿಗೆ ಛಬ್ಬಿ ಗ್ರಾಮಸ್ಥರು ಬರ ಮಾಡಿಕೊಂಡರು. ಊರಲ್ಲಿ ಹಬ್ಬದ ವಾತಾವರಣ, ಪ್ರತಿ ಮನೆಯ ಮುಂದೆ ರಂಗವಲ್ಲಿ ಹಾಕಿದ್ದಾರೆ. ರಾತ್ರಿ ಹನ್ನೊಂದು ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಯು ಜನ ಅಹವಾಲು ಸಲ್ಲಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಸ್ವಲ್ಪವೇ ಕೆಲಸ ಮಾಡಿದರು ಜನರು ಹೆಚ್ಚಿನ ಪ್ರೀತಿ ಆದರಗಳನ್ನು ತೋರುತ್ತಾರೆ. ಗ್ರಾಮಸ್ಥರು ತೋರಿದ ಪ್ರೀತಿಗೆ ಚಿರ ಋಣಿ ಆಗಿದ್ದೇನೆ. ಗ್ರಾಮ ವಾಸ್ತವ್ಯ ಯಶಸ್ವಿಯಾಗಿದೆ ಎಂದು ಹೇಳಿದರು.