ಬೆಡ್ ಬ್ಲಾಕಿಂಗ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ

ಬೆಂಗಳೂರು, ಮೇ ೫- ಬಿಬಿಎಂಪಿಯ ವಾರ್ ರೂಂನಲ್ಲಿ ನಡೆದಿರುವ ಬೆಡ್ ಬ್ಲಾಕ್ ದಂಧೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿಯಿಂದಲೇ ತನಿಖೆ ಆರಂಭಿಸಲಾಗಿದೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಕೋವಿಡ್‌ನ ಈ ಸಂಕಷ್ಟ ಕಾಲದಲ್ಲಿ ಅಮಾನವೀಯವಾಗಿ ಈ ಬೆಡ್ ಬ್ಲಾಕ್ ದಂಧೆ ನಡೆದಿರುವುದು ಖಂಡನೀಯ. ಈ ಹಗರಣದಲ್ಲಿ ಎಷ್ಟೇ ಉನ್ನತಾಧಿಕಾರಿ ಭಾಗಿಯಾಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸದ್ಯ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದಲ್ಲಿ ಈ ದಂಧೆ ಬಯಲಾಗಿದೆ. ಬಿಬಿಎಂಪಿಯ ಎಲ್ಲಾ ವಲಯದಲ್ಲೂ ಈ ರೀತಿ ನಡೆದಿರಬಹುದು. ತನಿಖೆ ನಂತರವೇ ಎಲ್ಲವೂ ಗೊತ್ತಾಗಲಿದೆ ಎಂದರು.
ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಸಂಬಂಧ ಪ್ರಧಾನಿಗಳ ಸೂಚನೆಯಂತೆ ನಡೆದುಕೊಳ್ಳಲಾಗುವುದು. ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ. ಯಾವ ತೀರ್ಮಾನಗಳಾಗುತ್ತವೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಮೇ ೧೨ರ ವರೆಗೂ ಜನತಾ ಕರ್ಫ್ಯೂ ಮುಂದುವರೆಯಲಿದೆ ಎಂದರು.
ಕೇಂದ್ರದ ತೀರ್ಮಾನಗಳನ್ನು ಆಧರಿಸಿ ರಾಜ್ಯದಲ್ಲಿಯೂ ಲಾಕ್‌ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ ಎಂದು ಅವರು ಹೇಳಿದರು.