ಲಾಕ್‌ಡೌನ್; ಪರಿಹಾರ ಪ್ಯಾಕೇಜ್‌ಗೆ ಹೆಚ್‌ಡಿಕೆ ಆಗ್ರಹ

ಬೆಂಗಳೂರು,ಮೇ ೧೭- ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆಯಾದರೆ ಅದು ಜನ ಹಿತದ ಲಾಕ್‌ಡೌನ್ ಆಗಿರಬೇಕು. ಜನರಿಗೆ ಪರಿಹಾರ ಪ್ಯಾಕೇಜ್ ಈ ಲಾಕ್‌ಡೌನ್‌ನಲ್ಲಿ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಲಾಕ್‌ಡೌನ್ ವಿಸ್ತರಿಸುವುದೇ ಆದರೆ ಅದು ಜನಹಿತದ ಲಾಕ್‌ಡೌನ್ ಆಗಿರಲಿ. ಆರ್ಥಿಕ, ಆಹಾರ ಪ್ಯಾಕೇಜ್ ಪರಿಹಾರ ಕ್ರಮಗಳು ಉದ್ದೇಶಿತ ವಿಸ್ತರಿತ ಲಾಕ್‌ಡೌನ್‌ನಲ್ಲಿ ಇರಲಿ, ಸರ್ವಪಕ್ಷ ಸಭೆಯಲ್ಲೂ ನಾವು ಹೇಳಿದ್ದು ಜನಹಿತದ ಲಾಕ್‌ಡೌನ್ ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ನೆರೆ ರಾಜ್ಯಗಳಲ್ಲಿ ಲಾಕ್‌ಡೌನ್ ಹೇಗಿದೆ? ಜನರಿಗೆ ಹೇಗೆ ನೆರವು ಸಿಗುತ್ತಿದೆ ಎಂಬುದನ್ನು ರಾಜ್ಯಸರ್ಕಾರ ಒಂದು ಬಾರಿ ಅವಲೋಕಿಸಬೇಕು. ಜನರನ್ನು ಮನೆಗಳಿಂದ ಹೊರ ಬಾರದಂತೆ ತಡೆಯುವುದಷ್ಟೇ ಈ ಲಾಕ್‌ಡೌನ್‌ನ ಉದ್ದೇಶವಾಗಬಾರದು. ಜನರಿಗೆ ಪರಿಹಾರ ನೀಡುವುದು ಅಗತ್ಯ ಎಂದವರು ತಿಳಿಸಿದ್ದಾರೆ.
ಜನರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್‌ಡೌನ್ ಉಸಾಬರಿಯನ್ನು ರಾಜ್ಯಸರ್ಕಾರಗಳಿಗೆ ವಹಿಸಿ ಕೈ ತೊಳೆದುಕೊಂಡಿದೆ. ರಾಜ್ಯಸರ್ಕಾರ ಕೇಂದ್ರ ಜನರ ಕೈಬಿಟ್ಟಂತೆ ಜನರನ್ನು ನಿರ್ಲಕ್ಷಿಸಬಾರದು, ಲಾಕ್‌ಡೌನ್‌ನಲ್ಲಿ ಪರಿಹಾರ ಕ್ರಮಗಳು ಇರಬೇಕು ಎಂದರು.
ಲಾಕ್‌ಡೌನ್ ಜನರ ಬದುಕನ್ನು ಹೈರಾಣಾಗಿಸುತ್ತದೆ. ಹಾಗಾಗಿ ಜನರ ಜೀವ ಉಳಿಸುತ್ತಲೇ ಜೀವನಕ್ಕೂ ನೆರವಾಗುವುದು ಜನಪರ ಸರ್ಕಾರದ ಕರ್ತವ್ಯ ಎಂದು ಅವರು ಟ್ವೀಟ್ ಮಾಡಿದ್ದಾರೆ.