ಲಾಕ್‌ಡೌನ್ ಜಾರಿ : ಸಿಎಂ ಜತೆ ಚರ್ಚಿಸಿಲ್ಲ

ಬೆಂಗಳೂರು, ಏ. ೨೫- ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ವಾರಪೂರ್ತಿ ಲಾಕ್‌ಡೌನ್ ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಯಾವುದೇ ಚರ್ಚೆಗಳು ನಡೆದಿಲ್ಲ. ಸದ್ಯ ಈಗಿರುವ ಮಾರ್ಗಸೂಚಿಗಳೇ ಮುಂದುವರೆಯಲಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರಾಂತ್ಯ ಕರ್ಫ್ಯೂ ಯಶಸ್ವಿಯಾಗಿ ಜಾರಿಯಾಗಿದೆ. ವಾರಪೂರ್ತಿ ಕರ್ಫ್ಯೂ ಜಾರಿ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಸದ್ಯ ಕೊರೊನಾ ತಡೆಗೆ ಈಗಿರುವ ಕಠಿಣ ಕ್ರಮಗಳೇ ಮುಂದುವರೆಯಲಿವೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆ ನಿನ್ನೆ ರಾತ್ರಿ ಲಾಕ್‌ಡೌನ್ ಜಾರಿ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿ, ಆ ರೀತಿಯ ಚರ್ಚೆಗಳು ನಡೆದಿಲ್ಲ. ನಾಳೆ ಸಚಿವ ಸಂಪುಟ ಸಭೆಯಲ್ಲಿ ಎಲ್ಲದರ ಬಗ್ಗೆಯೂ ಚರ್ಚೆಗಳಾಗುತ್ತವೆ ಎಂದರು.
ಕೊರೊನಾಗೆ ಸಂಬಂಧಿಸಿದ ರೆಮಿಡಿಸಿವಿರ್ ಔಷಧಿ ಕೊರತೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ೫೦ ಸಾವಿರದಿಂದ ೧.೨೨ ಲಕ್ಷ ರೆಮಿಡಿಸಿವಿರ್ ಔಷಧಿ ಒದಗಿಸಲು ಒಪ್ಪಿದೆ ಎಂದರು.
ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆ ಸರ್ಕಾರದ ಗಮನಕ್ಕೆ ಬಂದಿದೆ. ಆ ಸಮಸ್ಯೆಯನ್ನು ಸದ್ಯದಲ್ಲೇ ಬಗೆಹರಿಸುವುದಾಗಿಯೂ ಅವರು ಹೇಳಿದರು.