ಲಾಕ್‌ಡೌನ್ ಚರ್ಚೆಯಾಗಿಲ್ಲ ಸೋಮಣ್ಣ ಸ್ಪಷ್ಟನೆ

ಬೆಂಗಳೂರು, ಏ.೧೬- ರಾಜ್ಯದಲ್ಲಿ ಒಂದೇ ಬಾರಿಗೆ ಲಾಕ್ ಡೌನ್ ಜಾರಿ ಎಂದರೆ ಜನರ ಸ್ಥಿತಿ ಹದಗೆಟ್ಟಲಿದೆ.ಹಾಗಾಗಿ, ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಇನ್ನೂ, ಮೂರು- ನಾಲ್ಕು ದಿನಗಳ ಕಾಯೋಣ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಪೂರ್ವ ವಲಯ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಮತ್ತು ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
ತಜ್ಞರ ಸಲಹೆಗಳನ್ನು ಸರ್ಕಾರ ಪರಿಗಣಿಸಿದೆ. ಆದರೆ, ಎಲ್ಲವನ್ನೂ ಬಂದ್ ಮಾಡುವುದು ಅಷ್ಟೊಂದು ಸುಲಭವಲ್ಲ. ಬಡವನ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಬೆಂಗಳೂರಿನಲ್ಲಿಯೇ ದಿನಕ್ಕೆ ದುಡಿದು ತಿನ್ನುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ, ಎಲ್ಲವನ್ನೂ ಸರ್ಕಾರ ಗಮನಿಸುತ್ತಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸರ್ವಪಕ್ಷ ಸಭೆಯ ಪ್ರಶ್ನೆಯ ಉತ್ತರಿಸಿದ ಅವರು, ವಿರೋಧ ಪಕ್ಷದವರು ಎಲ್ಲವನ್ನು ವಿರೋಧ ಮಾಡುವುದು ಸರಿಯಲ್ಲ. ಸಭೆಗೆ ಬಂದು ಅವರ ತಮ್ಮ ಅಭಿಪ್ರಾಯ ಹೇಳಲಿ. ಸಭೆಗೆ ಗೈರಾಗಿ, ಹೊರಗೆ ಟೀಕಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಸಿಂಪಡಣೆ: ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಈಡೀ ಬೆಂಗಳೂರಿನಲ್ಲಿ ಕೊರೋನಾ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುವುದು. ಈ ಸಂಬಂಧ ಜಲಮಂಡಳಿ, ಅಗ್ನಿ ಶಾಮಕ ದಳದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ವಿ.ಸೋಮಣ್ಣ ಹೇಳಿದರು.
ಲಸಿಕೆ ಹೆಚ್ಚಳ: ರಾಜ್ಯಕ್ಕೆ ೪೦ ಲಕ್ಷ ಕೋವಿಡ್ ಲಸಿಕೆ ಬರಲಿದ್ದು, ಶೀಘ್ರದಲ್ಲಿ ೧೦ ಲಕ್ಷ ಲಸಿಕೆ, ಅದರಲ್ಲೂ ಬೆಂಗಳೂರಿಗೆ ೩ ಲಕ್ಷ ಬರಲಿದೆ ಎಂದ ಅವರು, ಕೋವಿಡ್ ಪರೀಕ್ಷಾ ಪ್ರಮಾಣವೂ ಹೆಚ್ಚಳ ಮಾಡಿ ಕೊರೋನಾ ನಿಯಂತ್ರಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೇರಿದಂತೆ ಇನ್ನಿತರೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್ ವಿಚಾರದಲ್ಲಿ ಪಾಸ್..!
ಕೋವಿಡ್ ವಿಚಾರದಲ್ಲಿ ನಾವು ಹತ್ತನೇ ತರಗತಿ ಉತ್ತೀರ್ಣರಾಗಿ, ಪಿಯುಸಿಗೆ ಹೋಗಿದಂತೆ ಆಗಿದೆ. ಹಾಗಾಗಿ, ದಿನೇ ದಿನೇ ಅನುಭವ ಹೆಚ್ಚಾಗುತ್ತಿದೆ ಎಂದು ಸೋಮಣ್ಣ ಹಾಸ್ಯ ಚಟಾಕಿ ಹಾರಿಸಿದರು.

ಸಿಎಂ ಇನ್ನಷ್ಟು ದಿನ ಬ್ಯಾಟಿಂಗ್..!
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆರೋಗ್ಯ ಸುಧಾರಿಸಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲ್ಲದೆ, ಏನು ಆಗಲ್ಲ. ಇನ್ನಷ್ಟು ದಿನ ಬ್ಯಾಟಿಂಗ್ ಮಾಡುತ್ತಾರೆ ಎಂದು ಸೋಮಣ್ಣ ನುಡಿದರು.