ಲಾಕ್‌ಡೌನ್ : ಕೆಲ ರಾಜ್ಯಗಳಲ್ಲಿ ವಿಸ್ತರಣೆ


ನವದೆಹಲಿ, ಮೇ.೩೧-ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್-೧೯ ಹರಡುವಿಕೆ ತಡೆಗೆ ವಿಧಿಸಲಾಗಿರುವ ಲಾಕ್‌ಡೌನ್ ಅನ್ನು ವಿಸ್ತರಿಸಲಾಗಿದೆ.ಮಹಾರಾಷ್ಟ್ರದಲ್ಲಿ ಜೂನ್ ೧೫ರ ವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಕೋವಿಡ್ ಪಾಸಿಟಿವಿಟಿ ದರ, ಆಮ್ಲಜನಕ ಹಾಸಿಗೆಗಳ ಲಭ್ಯತೆ ನೋಡಿಕೊಂಡು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಹೆಚ್ಚಿನ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿ, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ -೧೯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆ ಕಾರಣದಿಂದ ಲಾಕ್‌ಡೌನ್ ಅನಿ ವಾರ್ಯವಾಗಿದೆ. ಮತ್ತೊಂದೆಡೆ ಕೋವಿಡ್ -೧೯ ಪ್ರಕರಣಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಆರು ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಸೇರಿದೆ ಎಂದು ಹೇಳಿದ್ದಾರೆ.
ಒಡಿಶಾ ಸರ್ಕಾರವೂ ಸಹ ಜೂನ್ ೧೭ ರವರೆಗೆ ಲಾಕ್‌ಡೌನ್ ವಿಸ್ತರಿಸಿ ಘೋಷಣೆ ಮಾಡಿದೆ. ಲಾಕ್‌ಡೌನ್ ಮುಖ್ಯವಾಗಿ ಜನರ ಚಲನೆಯನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿದೆ. ಇನ್ನು, ಹಿಂದಿನ ಲಾಕ್‌ಡೌನ್‌ಗಳ ಎಲ್ಲಾ ನಿರ್ಬಂಧಗಳು ಮತ್ತು ವಿನಾಯಿತಿಗಳನ್ನು ಮೂರನೇ ಹಂತದಲ್ಲಿಯೂ ಜಾರಿಗೆ ತರಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುರೇಶ್ ಮೊಹಾಪಾತ್ರ ಹೇಳಿದರು.
ಇನ್ನೂ, ಅಲ್ಲಿಯೂ ಇದುವರೆಗೆ ೭೫೬,೬೮೪ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ೨,೭೭೨ ಮಂದಿ ಕೊನೆಯುಸಿರೆಳೆದಿದ್ದಾರೆ.
ಅದೇ ರೀತಿ, ತೆಲಂಗಾಣದಲ್ಲಿ ೧೦ ದಿನಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದ್ದು, ಜೂನ್ ೯ರವರೆಗೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಕಚೇರಿಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನು, ಕೆಲವಸ್ತುಗಳ ಖರೀದಿಗಾಗಿ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಸಮಯ ವಿಸ್ತರಿಸಲಾಗಿದೆ ಎಂದೂ ಹೇಳಿದ್ದು, ರಾಜ್ಯದಲ್ಲಿ ಇದುವರೆಗೆ ೫೭೫,೮೨೭ ಪ್ರಕರಣಗಳು ಮತ್ತು ೩,೨೬೩ ಸಾವುಗಳು ವರದಿಯಾಗಿವೆ.
ಹರಿಯಾಣದಲ್ಲೂ ವ್ಯಾಪಾರ ಕೇಂದ್ರಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಿದರೂ, ಸರ್ಕಾರವು ಲಾಕ್‌ಡೌನ್ ಅನ್ನು ಒಂದು ವಾರ (ಜೂನ್ ೭ ರವರೆಗೆ) ವಿಸ್ತರಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದೆ. ಆದರೂ ಸುರಕ್ಷತೆ ಗಾಗಿ ಲಾಕ್‌ಡೌನ್ ಅನ್ನು ಜೂನ್ ೭ ರಂದು ಬೆಳಿಗ್ಗೆ ೫ ಗಂಟೆಯವರೆಗೆ ವಿಸ್ತರಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ ೭೫೫,೩೮೯ ಪ್ರಕರಣಗಳು ವರದಿಯಾಗಿದ್ದು,೮,೨೨೧ ಸಾವುಗಳು ಸಂಭವಿಸಿವೆ ಎಂದರು.ಮತ್ತೊಂದೆಡೆ ನಾಳೆಯಿಂದ ೬೦೦ ಕ್ಕಿಂತ ಕಡಿಮೆ ಸಕ್ರಿಯ ಕೋವಿಡ್ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿದೆ.
ಜತೆಗೆ ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯ ಕಾರ್ಯದರ್ಶಿ ಆರ್.ಕೆ.ತಿವಾರಿ, ಕಂಟೈನ್‌ಮೆಂಟ್ ವಲಯಗಳ ಹೊರಗಿನ ಅಂಗಡಿಗಳು ಮತ್ತು ಮಾರುಕಟ್ಟೆಗಳು ಜೂನ್ ೧ ರಿಂದ ಬೆಳಿಗ್ಗೆ ೭ ರಿಂದ ಸಂಜೆ ೭ ರವರೆಗೆ (ಸೋಮವಾರದಿಂದ ಶುಕ್ರವಾರದವರೆಗೆ) ತೆರೆಯಬಹುದು. ರಾತ್ರಿ ಕರ್ಫ್ಯೂ ಮುಂದುವರೆಯಲಿದೆ ಎಂದರು.
ಆನ್‌ಲಾಕ್ ಪ್ರಕ್ರಿಯೆ ಆರಂಭ
ಜಮ್ಮು ಮತ್ತು ಕಾಶ್ಮೀರದಲ್ಲಿ ಆನ್‌ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಕರೋನಾ ಕರ್ಫ್ಯೂ ಅನ್ನು ರಾತ್ರಿ ವೇಳೆ ಮಾತ್ರ ಇರಲಿದ್ದು, ವಾರಾಂತ್ಯಗಳಲ್ಲಿ ಮಾತ್ರವೇ ಲಾಕ್ ಡೌನ್ ಇರಲಿದೆ. ಅದೇ ರೀತಿ, ಮಧ್ಯಪ್ರದೇಶ ಸರ್ಕಾರವು ನಾಳೆಯಿಂದ ಆನ್‌ಲಾಕ್ ಪ್ರಕ್ರಿಯೆ ಪ್ರಾರಂಭಿ ಸಲಿದ್ದು, ಹಲವು ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜೇಶ್ ರಾಜೋರಾ ಹೇಳಿದರು.