ಲಾಕ್‌ಡೌನ್ ಇಲ್ಲ ಕಠಿಣ ನಿಯಮ

ಬೆಂಗಳೂರು, ಮಾ. ೨೨- ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ತಡೆಗೆ ರಾಜ್ಯಾದ್ಯಂತ ಲಾಕ್‌ಡೌನ್ ಆಗಲಿ, ಸೆಮಿ ಲಾಕ್‌ಡೌನ್ ಆಗಲಿ, ನೈಟ್ ಕರ್ಫ್ಯೂ ಆಗಲಿ ಜಾರಿ ಮಾಡದಿರುವ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿದ್ದು, ಲಾಕ್‌ಡೌನ್ ಇಲ್ಲದೆ ಹಾಲಿ ಇರುವ ನಿಯಮಗಳನ್ನು ಮತ್ತಷ್ಟು ಬಿಗಿಯಾಗಿ ಅನುಷ್ಠಾನಗೊಳಿಸುವ ತೀರ್ಮಾನಕ್ಕೆ ಸಂಪುಟ ಸಭೆ ಬಂದಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ತಡೆಗೆ ಲಾಕ್‌ಡೌನ್, ಸೆಮಿ ಲಾಕ್‌ಡೌನ್, ನೈಟ್ ಕರ್ಫ್ಯೂ ಜಾರಿ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಮೂಲಗಳು ಹೇಳಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್, ಕೊರೊನಾ ತಡೆಗೆ ಸೆಮಿ ಲಾಕ್‌ಡೌನ್ ಮತ್ತು ನೈಟ್ ಕರ್ಫ್ಯೂ ಜಾರಿ ಮಾಡುವ ಅಗತ್ಯತೆಯನ್ನು ಪ್ರಸ್ತಾಪಿಸಿದರಾದರೂ, ಮುಖ್ಯಮಂತ್ರಿ ಯಡಿಯೂರಪ್ಪ ಈಗ ಲಾಕ್‌ಡೌನ್ ಬೇಡ. ಜನ ನಿಯಮಗಳನ್ನು ಪಾಲನೆ ಮಾಡುವಂತೆ ಬಿಗಿ ಕ್ರಮ ಕೈಗೊಳ್ಳೋಣ. ಸದ್ಯಕ್ಕೆ ಯಾವುದೇ ಲಾಕ್‌ಡೌನ್ ಬೇಡ ಎಂದು ಸ್ಪಷ್ಟವಾಗಿ ಹೇಳಿದರು ಎನ್ನಲಾಗಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಈಗ ಸುಧಾರಣೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಮಾಡುವುದು ಆರ್ಥಿಕ ದೃಷ್ಟಿಯಿಂದ ಸರಿ ಹೋಗಲ್ಲ ಎಂದು ಮುಖ್ಯಮಂತ್ರಿಗಳು ಹೇಳಿ, ಸೋಂಕು ಹೆಚ್ಚಾದರೆ ನಿಯಮಗಳನ್ನು ಪರಿಷ್ಕರಣೆ ಮಾಡಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸೋಣ ಎಂದು ಸೂಚಿಸಿದರು ಎನ್ನಲಾಗಿದೆ.
ಸೋಂಕು ಇದೇ ರೀತಿ ಹೆಚ್ಚಾಗುತ್ತಾ ಹೋದರೆ ತಜ್ಞರ ಜತೆ ಚರ್ಚಿಸಿ ಮುಂದಿನ ತೀರ್ಮಾನಗಳನ್ನು ಮಾಡೋಣ. ಸದ್ಯಕ್ಕಂತೂ ಯಾವುದೇ ಲಾಕ್‌ಡೌನ್ ಬೇಡ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದರು ಎನ್ನಲಾಗಿದೆ.
ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೆ ಸಂಪುಟ ಸದಸ್ಯರು ಸಹಮತಿ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
ಮೀಸಲಾತಿ ಹೆಚ್ಚಳ ನಿಲುವು
ದೇಶದಲ್ಲಿ ವಿವಿಧ ವರ್ಗಗಳ ಮೀಸಲಾತಿ ಬೇಡಿಕೆಗಳ ಹಿನ್ನೆಲೆಯಲ್ಲಿ ಮೀಸಲಾತಿಯ ಪ್ರಮಾಣವನ್ನು ಶೇ. ೫೦ ಕ್ಕಿಂತ ಹೆಚ್ಚು ಮಾಡುವ ಬಗ್ಗೆ ಸುಪ್ರೀಂಕೋರ್ಟ್ ರಾಜ್ಯದ ನಿಲುವಿನ ಬಗ್ಗೆ ಅಭಿಪ್ರಾಯ ಕೇಳಿರುವ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳದ ಬಗ್ಗೆಯೂ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಮೀಸಲಾತಿ ಹೆಚ್ಚಿಸುವ ನಿಲುವನ್ನು ಸುಪ್ರೀಂಕೋರ್ಟಿಗೆ ಸಲ್ಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ.
ರಾಜ್ಯದಲ್ಲೂ ವಿವಿಧ ವರ್ಗಗಳು ಮೀಸಲಾತಿ ಹೆಚ್ಚಳ ಬೇಡಿಕೆ ಇಟ್ಟಿವೆ. ಹಾಗಾಗಿ ಈಗಿನ ಶೇ. ೫೦ರ ಇತಿಮಿತಿಯ ಮೀಸಲಾತಿಯಲ್ಲಿ ಈ ಮೀಸಲಾತಿ ಬೇಡಿಕೆ ಈಡೇರಿಕೆಗೆ ಕಷ್ಟ. ಹಾಗಾಗಿ ಸುಪ್ರೀಂಕೋರ್ಟ್‌ಗೆ ಮೀಸಲಾತಿಯನ್ನು ಶೇ. ೫೦ ರಷ್ಟು ಹೆಚ್ಚಿಸಬೇಕು ಎಂಬ ರಾಜ್ಯದ ನಿಲುವನ್ನು ಸಲ್ಲಿಸೋಣ ಎಂಬ ತೀರ್ಮಾನಕ್ಕೂ ಸಂಪುಟ ಸಭೆ ಬಂದಿದೆ.
ಮೀಸಲಾತಿ ಹೆಚ್ಚಳ ಸಂಬಂಧ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದಿದ್ದು, ನಾಳೆ ಒಳಗೆ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವನ್ನು ತಿಳಿಸಬೇಕಿದೆ. ಹಾಗಾಗಿ ಇಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಮೀಸಲಾತಿ ಏರಿಕೆ ಸಮಂಜಸ ಎಂಬ ನಿಲುವನ್ನು ಸುಪ್ರೀಂಕೋರ್ಟ್‌ಗೆ ನೀಡುವ ತೀರ್ಮಾನಕ್ಕೆ ಸಂಪುಟ ಸಭೆಯಲ್ಲಿ ಬಂದಿದೆ ಎನ್ನಲಾಗಿದೆ.
ಸಿಡಿ ತಿರುಗೇಟು
ಇಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮಾಜಿ ಸಚಿವ ರಮೇಶ್‌ಜಾರಕಿಹೊಳಿ ರಾಸಲೀಲೆಯ ಸಿಡಿ ಹಾಗೂ ಆರು ಜನ ಸಚಿವರ ತೇಜೋವಧೆ ಪ್ರಕರಣಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆ ತಂದಿರುವ ವಿಚಾರವನ್ನು ಪ್ರಸ್ತಾಪಿಸುತ್ತಿರುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆದು ಸಚಿವರುಗಳಾದ ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಡಾ.ಕೆ. ಸುಧಾಕರ್ ಇವರುಗಳು ನ್ಯಾಯಾಲಯದಿಂದ ತಡೆ ತರುವುದು ನಮ್ಮ ಹಕ್ಕು. ಇದನ್ನು ಪ್ರಶ್ನಿಸಲು ಕಾಂಗ್ರೆಸ್‌ಗೆ ಏನು ಅಧಿಕಾರ ಇದೆ ಎಂದು ಸಂಪುಟ ಸಭೆಯಲ್ಲೇ ಪ್ರಶ್ನಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಪಕ್ಷಗಳ ಈ ಪ್ರಸ್ತಾವವನ್ನು ಸದನದಲ್ಲಿ ಎಲ್ಲಾ ಸಚಿವರುಗಳು ಒಗ್ಗಟ್ಟಾಗಿ ಎದುರಿಸುವಂತೆ ಸೂಚನೆ ನೀಡಿದರು ಎನ್ನಲಾಗಿದೆ.