ಲಾಕ್‌ಡೌನ್ ಆಟಕುಂಟು… ಲೆಕ್ಕಕ್ಕಿಲ್ಲ… ನಗರದಲ್ಲಿ ಪಾಲನೆಯಾಗುತ್ತಿಲ್ಲ ಕೋವಿಡ್-19 ಮಾರ್ಗಸೂಚಿ

ದಾವಣಗೆರೆ,ಮೇ.27: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್ ವಿಧಿಸಿದೆ. ಆದರೆ, ಸರ್ಕಾರದ ಯಾವುದೇ ಮಾರ್ಗಸೂಚಿ ಪಾಲನೆಯಾಗದಿರುವುದರಿಂದ ಈ ಲಾಕ್‌ಡೌನ್ ಆಟಕುಂಟು ಲೆಕ್ಕಕ್ಕಿಲ್ಲ ಎಂಬತಾಗಿದೆ.
ಹೌದು… ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಜಿಲ್ಲಾಡಳಿತ ಮೇ 31ರ ಬೆಳಿಗ್ಗೆ ಆರು ಗಂಟೆಯ ವರೆಗೆ ಕಠಿಣ ಲಾಕ್‌ಡೌನ್ ಗೊಳಿಸಿದೆ. ಆದರೆ, ಲಾಕ್‌ಡೌನ್ ಮಾರ್ಗಸೂಚಿ ಸರಿಯಾಗಿ ಪಾಲನೆ ಆಗದಿರುವುದರಿಂದ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಅಲ್ಲಲ್ಲಿ ಹೋಟೆಲ್, ಸಣ್ಣಪುಟ್ಟ ದಿನಸಿ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿರುವುದು ಸಹ ನಗರದಲ್ಲಿಂದು ಕಂಡು ಬಂತು.

ಹೋಟೆಲ್ ತೆರೆದಿದ್ದರೂ ಗ್ರಾಹಕರು ಬಂದು ಆಹಾರ ಪಾರ್ಸೆಲ್ ಕೊಂಡ್ಡೊಯ್ಯುವಂತಿಲ್ಲ. ಬದಲಿಗೆ ಜೋಮೋಟೋ, ಸ್ವಿಗ್ಗಿ ಅಥವಾ ಹೋಟೆಲ್‌ನವರೇ ಉಪಹಾರ, ಊಟ ಪಾರ್ಸೆಲ್ ನೀಡಬೇಕೆಂಬ ನಿಯಮವಿದೆ. ಇಲ್ಲಿನ ವಿದ್ಯಾನಗರದ ನೂತನ್ ಕಾಲೇಜು ಬಳಿಯ ಸವಿತಾ ಹೋಟೆಲ್, ಶರಣಪ್ಪ ಹೋಟೆಲ್ ಸೇರಿದಂತೆ ನಗರದ ಹಲವು ಹೋಟೆಲ್‌ಗಳನ್ನು ತೆರೆದು ಗ್ರಾಹಕರಿಗೆ ಪಾರ್ಸೆಲ್ ನೀಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.
ಇನ್ನೂ ಗ್ರಾಹಕರು ಬಂದು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ನೀವೇಕೆ ಬಂದಿದ್ದೀರೆಂದು ಉಪಹಾರ ಪಾರ್ಸೆಲ್ ತೆಗೆದುಕೊಂಡು ಬಂದು ಹೋಗಿದ್ದ ಗ್ರಾಹಕರಾದ ನಿರಂಜನ್ ಮತ್ತು ಹೇಮಣ್ಣ ಅವರನ್ನು ಪ್ರಶ್ನಿಸಿದರೆ, ನಮಗೆ ಯಾವುದೇ ನಿಯಮ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಪಾರ್ಸೆಲ್ ತೆಗೆದುಕೊಂಡು ಹೋಗಲು ಹೊರಗಡೆ ಬಂದಿದ್ದೇವು. ಸವಿತ ಹೋಟೆಲ್ ತೆಗೆದಿತ್ತು ಹೀಗಾಗಿ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದೇವೆ. ಸುಖಾಸಮ್ಮನೆ ಸಾರ್ವಜನಿಕರಿಗೆ ದಂಡ ವಿಧಿಸಿ, ಕೇಸ್ ಹಾಕುವ ಅಧಿಕಾರಿಗಳು, ಪೊಲೀಸರು ಮೊದಲು ಹೋಟೆಲ್ ಬಂದ್ ಮಾಡಿಸಲಿ. ಹೋಟಲ್ ತೆರೆದಿದ್ದರೆ ತಾನೇ ನಾವು ಪಾರ್ಸೆಲ್ ತೆಗೆದುಕೊಂಡು ಹೋಗಲು ಬರುವುದು ಎಂದು ಮರು ಪ್ರಶ್ನೆ ಹಾಕಿದರು.
ಇನ್ನೂ ಈ ಬಗ್ಗೆ ಸವಿತ ಹೋಟೆಲ್ ಮಾಲೀಕರನ್ನು ಪ್ರಶ್ನಿಸಿದರೆ, ನಾವು ಸ್ಥಳೀಯ ಪಾಲಿಕೆ ಸದಸ್ಯರಿಂದ ಅನುಮತಿ ಪಡೆದು ಹೋಟೆಲ್ ತೆರೆದು, ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ನಡೆಸುತ್ತಿದ್ದೇವೆ ಎಂದು ಹೇಳಿದರು. ತರಕಾರಿ, ಹಣ್ಣು ಮಾರಾಟಕ್ಕೆ ತಳ್ಳುಗಾಡಿಯವರಿಗೆ ಅನುಮತಿ ನೀಡಿದ್ದು, ಅವರು ಗ್ರಾಹಕರ ಮನೆ ಬಾಗಿಲಿಗೆ ತರಕಾರಿ, ಹಣ್ಣು ತೆಗೆದುಕೊಂಡು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಬಹುತೇಕರು ಬೀದಿ, ಓಣಿಗಳಲ್ಲಿ ಹೋಗಿ ಮಾರಾಟ ಮಾಡದೆ ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಕೊಂಡು ವ್ಯಾಪಾರ ಮಾಡುತ್ತಿದ್ದರು. ಇದನ್ನು ಕಂಡ ಪೊಲೀಸರು ಅಲ್ಲಿಂದ ತೆರವುಗೊಳಿಸಿ, ಗಲ್ಲಿ, ಗಲ್ಲಿಯಲ್ಲಿ ಹೋಗಿ ಮಾರಾಟ ಮಾಡುವಂತೆ ತಾಕೀತು ಮಾಡಿ ವ್ಯಾಪಾರಸ್ಥರನ್ನು ಕಳುಹಿಸಿದರು.

ಅಲ್ಲದೆ, ನಗರದ ಹಲವೆಡೆ ಸಣ್ಣಪುಟ್ಟ ದಿನಸಿ ಅಂಗಡಿಗಳನ್ನು ತೆರೆದು ಹಾಲು, ಮೊಟ್ಟೆ ಇಟ್ಟು ದಿನಸಿ ವ್ಯಾಪಾರ ನಡೆಸುತ್ತಿರುವುದನ್ನು ಕಂಡ ಪೊಲೀಸರು ಅವುಗಳನ್ನು ಬಂದ್ ಮಾಡಿಸುತ್ತಿದುದು ಕಂಡು ಬಂತು. ಅನಗತ್ಯವಾಗಿ ಓಡಾಡುವವರ ವಾಹನ ತಡೆದು ದಂಡ ವಿಧಿಸುತ್ತಿರುವುದು ನಗರದ ಪ್ರಮುಖ ರಸ್ತೆ, ಬೀದಿಗಳಲ್ಲಿ ಕಂಡು ಬಂತು. ಆದರೆ, ರಸ್ತೆಗಳಲ್ಲಿ ವಾಹನ ಮತ್ತು ಜನರ ಓಡಾಟ ತುಸು ಹೆಚ್ಚಾಗಿಯೇ ಇತ್ತು. ಒಟ್ಟಾರೆ ನಾಮಕಾವಸ್ಥೆ ಲಾಕ್‌ಡೌನ್ ಜಾರಿಯಲ್ಲಿದ್ದು, ಅಲ್ಲಲ್ಲಿ ದಿನಸಿ, ತರಕಾರಿ, ಹಣ್ಣುಗಳ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿರುವುದು ಕಂಡು ಬಂತು.
ಬಾಕ್ಸ್ನಿರ್ಲಕ್ಷ್ಯವೇ ಸೋಂಕು ಹೆಚ್ಚಳಕ್ಕೆ ಕಾರಣ
ಲಾಕ್‌ಡೌನ್ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಜಾರಿ ಮಾಡುವುದರಲ್ಲಿ ಅಧಿಕಾರಿಗಳು ನಿರ್ಲಕಷ್ಯ ವಹಿಸಿರುವುದರಿಂದಲೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂಬ ಚರ್ಚೆ ಅಲ್ಲಲ್ಲಿ ನಡೆಯುತ್ತಿದೆ.ಕಠಿಣ ಲಾಕ್‌ಡೌನ್ ಜಾರಿಯಲ್ಲಿದ್ದರೂ ನಗರದ ಹಲವೆಡೆ ಲಾಕ್‌ಡೌನ್ ಅನ್ನುವುದೇ ಇಲ್ಲ ಎಂಬ ವಾತಾವರಣ ಕಂಡು ಬರುತ್ತಿದ್ದು, ಜನರು ಹಲವೆಡೆ ಓಡಾಡುತ್ತಿರುವುದೇ ಜಿಲ್ಲೆಯಲ್ಲಿ 400ರಿಂದ 500ರ ಆಸುಪಾಸಿನಲ್ಲಿ ಬರುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಬುಧವಾರ 1300ರ ಗಡಿ ದಾಟಲು ಕಾರಣವಾಗಿದೆ ಎನ್ನಲಾಗಿದೆ.ಇನ್ನೂ ಮುಂದಾದರೂ ಅಧಿಕಾರಿಗಳು, ಪೊಲೀಸರು ಕಟ್ಟುನಿಟ್ಟಾಗಿ ಲಾಕ್‌ಡೌನ್ ನಿಯಮಗಳನ್ನು ಜಾರಿಗೆ ತರುವ ಮೂಲಕ ಕೋವಿಡ್ ಮಹಾಮಾರಿಯ ನಿಯಂತ್ರಣಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.