ಲಾಕ್‌ಡೌನ್ ಅನ್ನವಿಲ್ಲದೆ ನಿರ್ಗತಿಕರ ಪರದಾಟ

ಶಿವಮೊಗ್ಗ, ಏ. ೩೦- ’ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ, ಅನ್ನವಿರುವತನಕ ಪ್ರಾಣವು, ಜಗದೊಳಗನ್ನವೇ ದೈವ…’ ಎಂಬ ಸರ್ವಜ್ಞನ ಮಾತು, ಸದ್ಯ ಹಸಿವಿನಿಂದ
ಕಂಗೆಡುತ್ತಿರುವವರಿಗೆ ನಿತ್ಯ ಸತ್ಯವೆನಿಸಿದೆ! ಪ್ರಸ್ತುತ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ, ರಾಜ್ಯಾದ್ಯಂತ ೧೪ ದಿನಗಳ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರ ನೇರ ಎಫೆಕ್ಟ್ ನಗರ-ಪಟ್ಟಣ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುವವರು, ನಿಗರ್ತಿಕರ ’ಅನ್ನ’ದ ಮೇಲೆ ಬೀರಿದೆ..!
ಹೌದು. ಹೋಟೆಲ್, ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿರುವುದು, ಜನ ಸಂಚಾರ ಇಲ್ಲದಿರುವುದರಿಂದ ಇವರ ತುತ್ತು ಅನ್ನಕ್ಕೆ ಸಂಚಕಾರ ಬಂದೊದಗಿದೆ. ಹಸಿವು ಇಂಗಿಸಿಕೊಳ್ಳಲು ಇನ್ನಿಲ್ಲದ ಸಂಕಟ ಪಡುವಂತಾಗಿದೆ. ಆದರೆ ಇವರ ಹಸಿವು ಇಂಗಿಸುವ ಕಾರ್ಯದಲ್ಲಿ, ಹಲವು ಔದಾರ್ಯ ವ್ಯಕ್ತಿಗಳು ಮುಂದಾಗಿದ್ದಾರೆ. ಅವರಿದ್ದಲ್ಲಿಯೇ ಆಗಮಿಸಿ ಊಟ, ತಿಂಡಿ-ತಿನಿಸು, ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಇದು ನಿಗರ್ತಿಕರ ಪಾಲಿಗೆ ಆಶಾಕಿರಣವಾಗಿ ಪರಿಣಮಿಸಿದೆ. ಅನ್ನದಾನಿಗಳೇ ದೇವರಾಗಿ ಪರಿಣಮಿಸಿದ್ದಾರೆ.
ನೆರವು:
ಶಿವಮೊಗ್ಗ ನಗರದಲ್ಲಿ ನಿಗರ್ತಿಕರ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಬಹುತೇಕರು ನಾನಾ ರೋಗ-ರುಜಿನಗಳಿಂದ ಬಳಲುತ್ತಿದ್ದಾರೆ. ಕೆಲವರು ಮಾನಸಿಕ ಅಸ್ವಸ್ಥರು, ಅಶಕ್ತರಾಗಿದ್ದಾರೆ. ಬಸ್ ನಿಲ್ದಾಣ, ಪ್ರಮುಖ ರಸ್ತೆಗಳ ಫುಟ್‌ಪಾತ್, ಮತ್ತಿತರ ಪ್ರದೇಶಗಳು ಇವರ ಆವಾಸ ಸ್ಥಾನವಾಗಿದೆ. ದಿನನಿತ್ಯ ಭಿಕ್ಷೆ ಬೇಡಿ ಅನ್ನಾಹಾರ ಸಂಪಾದಿಸುತ್ತಾರೆ. ಆದರೆ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಜನತಾ ಕರ್ಫ್ಯೂವಿನಿಂದ ಇವರ ಅನ್ನಾಹಾರಕ್ಕೆ ತೊಂದರೆ ಉಂಟಾಗಿದೆ. ಹಸಿವಿನಿಂದ ಒಳಲುವಂತಾಗಿದೆ. ಇದರ ಮಾಹಿತಿ ಅರಿತ ಮಾನವೀಯ ಕಳಕಳಿಯುಳ್ಳ ವ್ಯಕ್ತಿಗಳು, ಇವರಿರುವಲ್ಲಿಗೆ ಆಗಮಿಸಿ ಅನ್ನಾಹಾರ ನೀಡುವ ಮೂಲಕ ಹಸಿವು ತಣಿಸುತ್ತಿದ್ದಾರೆ. ಈ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಯಾರಿವರು?
ಇವರು ಎಲ್ಲಿಂದ ಬರುತ್ತಾರೆ, ಇವರ ಹಿನ್ನೆಲೆಯೇನು, ಎಂಬುವುದರ ಯಾವ ವಿವರಗಳೂ ಗೊತ್ತಾಗುವುದಿಲ್ಲ. ನಿರಾಶ್ರಿತರ ಕೇಂದ್ರದವರು ಇವರನ್ನು ಕೆಲವೊಮ್ಮೆ ಕರೆದೊಯ್ಯುತ್ತಾರೆ. ಆದರೆ ಮತ್ತೆ ಇವರು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅನ್ನಾಹಾರದ ಕೊರತೆ, ಅನಾರೋಗ್ಯ ಮತ್ತಿತರ ಕಾರಣಗಳಿಂದ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ.
ಸ್ಥಳಾಂತರ:
ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿದ್ದ ನಿರ್ಗತಿಕರನ್ನು ನಿರಾಶ್ರಿತರ ಶಿಬಿರದವರು ವಾಹನದಲ್ಲಿ ಕರೆದೊಯ್ದಿದ್ದರು. ಆದರೆ ಗುರುವಾರ ಇದೇ ಸ್ಥಳದಲ್ಲಿ ಮತ್ತೆ ಅಶಕ್ತರು ಕಾಣಿಸಿಕೊಂಡಿದ್ದರು. ವಿವಿಧ ಸಂಘಸಂಸ್ಥೆಗಳು ನೀಡಿದ ಅನ್ನಾಹಾರ ಸೇವಿಸಿ, ವಿಶ್ರಮಿಸುತ್ತಿದ್ದ ದೃಶ್ಯ ಕಂಡುಬಂದಿತು. ಇವರಿಗಿಲ್ಲ ಕೊರೊನಾ ಚಿಂತೆ!: ಇಡೀ ದೇಶ ಕೊರೊನಾ ವೈರಸ್ ಆತಂಕದಲ್ಲಿ ಮುಳುಗಿದೆ. ಆದರೆ ಭಿಕ್ಷುಕರು, ನಿರ್ಗತಿಕ ವರ್ಗದವರಿಗೆ ಈ ವೈರಸ್ನ ಚಿಂತೆಯೇ ಇಲ್ಲವಾಗಿದೆ. ಇವರಿಗೇನಿದ್ದರೂ ತುತ್ತಿನ ಚೀಲ ತುಂಬಿಸಿಕೊಳ್ಳುವ ಯೋಚನೆಯಾಗಿದೆ.