ಲಾಕ್‌ಡೌನ್-ಅಗತ್ಯ ವಸ್ತು ಖರೀದಿಗೆ ಸುಳ್ಯದಲ್ಲಿ ಜನಜಂಗುಳಿ

ಸುಳ್ಯ, ಎ.೨೮- ಎರಡು ದಿನಗಳ ವೀಕೆಂಡ್ ಕರ್ಫ್ಯೂನಿಂದ ಸ್ತಬ್ಧಗೊಂಡಿದ್ದ ಸುಳ್ಯದಲ್ಲಿ ಸೋಮವಾರ ಮತ್ತೆ ಸೇವೆಗಳೊಂದಿಗೆ ಕಾರ್ಯ ಚಟುವಟಿಕೆ ಆರಂಭಗೊಂಡು ಯಥಾಸ್ಥಿತಿಗೆ ಮರಳಿದಂತಹ ವಾತಾವರಣ ಕಂಡು ಬಂತು. ಆದರೆ ಮಧ್ಯಾಹ್ನದ ಹೊತ್ತಿಗೆ ರಾಜ್ಯ ಸರಕಾರ ಮತ್ತೆ ಎರಡು ವಾರಗಳ ಕರ್ಫ್ಯೂ ವಿಧಿಸಿದ್ದರಿಂದ ಕಂಗಾಲಾದ ಜನರು ಮಂಗಳವಾರ ಅಗತ್ಯ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದರು.
ಸುಳ್ಯದ ಬಹುತೇಕ ದಿನಸಿ, ತರಕಾರಿ, ಹಣ್ಣುಹಂಪಲು ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡು ಬಂತು. ಒಟ್ಟಿನಲ್ಲಿ ಎರಡು ದಿನದ ವೀಕೆಂಡ್ ಕರ್ಫ್ಯೂವಿನಿಂದ ಮುಕ್ತಿಪಡೆದ ಜನತೆ ಮಂಗಳವಾರ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೂ ಕೂಡ ಎ.೨೭ರ ರಾತ್ರಿ ೯ರಿಂದ ಮತ್ತೆ ಕರ್ಫ್ಯೂ ಘೋಷಿಸಿದ್ದರಿಂದ ಕಂಗಾಲಾಗಿದ್ದಾರೆ.