ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಮುಖ

ಮಂಗಳೂರು, ಜೂ.೧೧- ರಾಜ್ಯದಲ್ಲಿ ಕೋವಿಡ್-೧೯ ಸೋಂಕು ತೀವ್ರಗೊಂಡ ಹಿನ್ನೆಲೆ ಸರ್ಕಾರ ಕೊರೋನಾ ಕಫ್ರ್ಯೂ ಕೈಗೊಂಡು ನಿರ್ಬಂಧಿಸಿದ ಕಾರಣ ಸೋಂಕು ಇಳಿಮುಖವಾಗುತ್ತಿದೆ. ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಹಾಸನ, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಇಳಿಮುಖವಾಗಿರುವುದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಅವರು ತಮ್ಮ ಗೃಹ ಕಚೇರಿಯಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ ೮ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಮಾತನಾಡುತ್ತಿದ್ದರು.
ಕೊರೋನಾ ಸೋಂಕು ಮೈಸೂರು ಹೊರತುಪಡಿಸಿ
ಇತರೇ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಂಡು ಸೋಂಕನ್ನು ನಿಯಂತ್ರಣಕ್ಕೆ ತರಬೇಕು ಎಂದರು.
೮ ಜಿಲ್ಲೆಗಳಲ್ಲಿಯೂ ಲಾಕ್‌ಡೌನ್ ಮುಂದುವರೆಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಾ..ಎಂದ ಅವರು, ಜಿಲ್ಲೆಯ ಯಾವ ಯಾವ ಕಾರ್ಯ ಚಟುವಟಿಕೆಗಳಿಗೆ ರಿಯಾಯಿತಿ ನೀಡಬೇಕೆಂಬ ತೀರ್ಮಾಣವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಚರ್ಚಿಸಿ ತೆಗೆದುಕೊಳ್ಳಬೇಕು. ಲಾಕ್‌ಡೌನ್ ಮುಂದುವರೆಸುವ ಕುರಿತ ಸಲಹೆಯನ್ನು ಸಚಿವರು ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಇಂದು ಸಂಜೆ ಚರ್ಚಿಸಿ ತೀರ್ಮಾಣವನ್ನು ತೆಗೆದುಕೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು. ಅವುಗಳ ಫಲಿತಾಂಶದ ವರದಿಯನ್ನು ೨೪ ಗಂಟೆಗಳ ಒಳಗಡೆ ನೀಡಬೇಕು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.೬೦ ರಷ್ಟು ಮಾತ್ರ ೨೪ ಗಂಟೆಗಳ ಒಳಗಡೆ ನೀಡಲಾಗುತ್ತಿದೆ. ಹೀಗಾಗದಂತೆ ಎಚ್ಚರವಹಿಸಬೇಕು. ಪಾಸಿಟಿವ್ ಪ್ರಕರಣದ ಸರಾಸರಿಯನ್ನು ಶೇ. ೫ ಕ್ಕಿಂತ ಕಡಿಮೆಗೊಳಿಸಿ ನಮಗೆ ಖಾತ್ರಿಪಡಿಸಬೇಕು ಎಂದರು.
ಸ್ಥಳೀಯವಾಗಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿಕೊಂಡು ಸೋಂಕು ಹತೋಟಿಗೆ ತರಲು ಮುಂದಾಗಬೇಕು. ಜಿಲ್ಲೆಗೆ ಹಂಚಿಕೆ ಯಾಗುವ ಕೊರೋನಾ ನಿರೋಧಕ ಚುಚ್ಚುಮದ್ದುಗಳನ್ನು ವಿಳಂಬವಿಲ್ಲದೇ ಜನರಿಗೆ ನೀಡುವ ಕಾರ್ಯ ಮಾಡಬೇಕು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಘೋಷಿಸಿರುವ ಕೊರೋನಾ ಕರ್ಫ್ಯೂವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ಸೋಂಕು ಪ್ರಕರಣಗಳು ಸರಾಸರಿ ಶೇ.೨೦ ರಷ್ಟು ಇದೆ. ಸೋಂಕನ್ನು ಗಣನೀಯವಾಗಿ ಕಡಿಮೆಗೊಳಿಸಲು ಲಾಕ್‌ಡೌನ್ ಅನ್ನು ಒಂದು ವಾರಗಳ ಕಾಲ , ಸೀಮಿತ ಕಾರ್ಯಚಟುವಟಿಕೆ ಸೇರಿದಂತೆ ಕೈಗಾರಿಕೆಗಳಲ್ಲಿ ಶೇ.೫೦ ರಷ್ಟು ಕಾರ್ಮಿಕರು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟು ಮುಂದುವರೆಸುವುದು ಒಳಿತು ಎಂದರು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲು ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲೆಯ ೮ ವೈದ್ಯಕೀಯ ಕಾಲೇಜುಗಳ ವೈದ್ಯರು ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಸಹಾಯದಿಂದ ಹೆಚ್ಚು ಹೆಚ್ಚು ಕೊರೋನಾ ಪರೀಕ್ಷೆ ನಡೆಸುವುದರ ಜೊತೆಗೆ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ವರ್ಗಾಯಿಸಲು ಆಧ್ಯತೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಗೆ ೩೫,೦೦೦ ಗಳಷ್ಟು ವ್ಯಾಕ್ಸಿನ್ ಡೋಸ್‌ಗಳನ್ನು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಅವರು, ನೀಡಿದಲ್ಲಿ ಅವುಗಳನ್ನು ಜನರಿಗೆ ನೀಡಲು ಯೋಜನೆಗಳನ್ನು ರೂಪಿಸಿ ಯಶಸ್ವಿಗೊಳಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ ಮಾತನಾಡಿ, ಜಿಲ್ಲೆಯಲ್ಲಿ ೬,೯೯೯ ಕೋವಿಡ್ ಪ್ರಕರಣಗಳಿದ್ದು, ಮಂಗಳೂರು ನಗರ ಹಾಗೂ ಬಂಟ್ವಾಳದ ಸುತ್ತಮುತ್ತ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ. ಪ್ರತಿದಿನ ೩೩೦೦ ರಿಂದ ೪೦೦೦ ವರೆಗೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಸುಳ್ಯ ತಾಲೂಕಿನ ಕಾಲೋನಿಗಳಲ್ಲಿ ಹಾಗೂ ವೃದ್ದಾಶ್ರಮಗಳಲ್ಲಿ ಕೋವಿಡ್ ಸೋಂಕು ಏಕಾಏಕಿ ಹರಡಿ
ಹೆಚ್ಚಿನ ಸಕ್ರೀಯ ಪ್ರಕರಣಗಳು ಬರುತ್ತಿವೆ ಎಂದರು.
ಕೊರೋನಾ ಸೋಂಕು ಹೊಂದಿರುವ ೪೫೦ ಜನರನ್ನು ಕೋವಿಡ್ ಕೇರ್ ಸೆಂಟರ್‌ಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿರುವವರ ಸಂಖ್ಯೆ ಕಡಿಮೆಯಾಗಿದೆ. ಆಕ್ಸಿಜೆನ್ ಅವಶ್ಯಕತೆಯು ಸಹ ಕಡಿಮೆಯಲ್ಲಿದೆ. ಜಿಲ್ಲೆಯ ವೆನ್‌ಲಾಕ್ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಕೇಂದ್ರದಲ್ಲಿ ಪ್ರತಿದಿನ ೨೫೦೦ ರಷ್ಟು ಪರೀಕ್ಷೆ ನಡೆಯುತ್ತಿದೆ. ಇದರ ಜೊತೆಗೆ ಸುಳ್ಯದ ಕೆ.ಯು.ಜೆ ಖಾಸಗಿ ಮೆಡಿಕಲ್ ಕಾಲೇಜಿನಲ್ಲೂ ಸಹ ಪರೀಕ್ಷೆ ಮಾಡಲಾಗುತ್ತಿದೆ ಎಂದ ಅವರು, ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಆರ್.ಟಿ.ಪಿ.ಸಿ.ಆರ್ ನ ಪರೀಕ್ಷೆಯ ಯಂತ್ರವನ್ನು ಅಳವಡಿಸಲು ಡೈರೆಕ್ಟರ್ ಆಫ್ ಮೆಡಿಕಲ್ ಸೆಂಟರ್‌ನಲ್ಲಿ ಅನುಮತಿ ಕೋರಿರುತ್ತೇವೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಲು ರಿಂಗ್ ಸರ್ವೆಲೆನ್ಸ್ ಕಾರ್ಯವನ್ನು ಹಮ್ಮಿಕೊಳ್ಳುವುದರೊಂದಿಗೆ ಪಾಸಿಟಿವ್ ಬಂದಂತಹ ವ್ಯಕ್ತಿಯ ಸುತ್ತಮುತ್ತಲಿನ ಮನೆಗಳ ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದವರ ೫೦ ಜನರ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್, ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಅರವಿಂದ ಲಿಂಬಾವಳಿ, ಮುಖ್ಯ ಕಾರ್ಯದರ್ಶಿ ರವಿಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಸಹಾಯಕ ಆಯುಕ್ತ ಮದನ್ ಮೋಹನ್, ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್
ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯಾದ್ಯಂತ ಕೊರೋನಾ ಕರ್ಫ್ಯೂವನ್ನು ಮತ್ತಷ್ಟು ಬಿಗಿಗೊಳಿಸಿ ಪರಿಣಾಮಕಾರಿಯಾಗಿ ಕೈಗೊಂಡು ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು. ಜನರು ಕರ್ಫ್ಯೂ ನಿರ್ಬಂಧವನ್ನು ಉಲ್ಲಂಘಿಸಿದರೆ, ಅವರುಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಮೈಕ್ರೋಕಂಟೈನ್‌ಮೆಂಟ್ ಗಳಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಒತ್ತು ನೀಡಬೇಕು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ