‘ಲಾಕ್ಡೌನ್ ಸ್ಪೆಷಲ್’ ಭಾವಗೀತೆಗೆ ಜೀವ ತುಂಬಿದ ‘ಹಸ್ತಾಭಿನಯ’

ಮೇಘಾ ಪಾಲೆತ್ತಾಡಿ
ಪುತ್ತೂರು, ಜೂ.೧- ನಾಟ್ಯ ಪರಂಪರೆಯಲ್ಲಿ ವಿನೂತನ ಪ್ರಯತ್ನಗಳು ಸದಾ ನಡೆಯುತ್ತಲೇ ಇವೆ. ಭರತನಾಟ್ಯ, ಕೂಚುಪುಡಿ, ಕಥಕ್ ಸೇರಿದಂತೆ ನಾಟ್ಯ ಭೂಮಿಕೆಯಲ್ಲಿ ಪ್ರತಿಯೊಬ್ಬ ಕಲಾವಿದ ತನ್ನ ದೇಹದ ಅಂಗಾಂಗಗಳ ಭಾವಾಭಿನಯದ ಮೂಲಕ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಒಯ್ಯುವ ಪ್ರಯತ್ನ ಮಾಡುತ್ತಾನೆ. ಆದರೆ ದೇಹದ ಚಲನೆಯನ್ನೇ ಹೊರತು ಪಡಿಸಿ ಕೇವಲ ಹಸ್ತ ಮುದ್ರೆಯಲ್ಲಿಯೇ ಭಾವಗೀತೆಯೊಂದಕ್ಕೆ ಜೀವ ತುಂಬಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೊ ನಾಟ್ಯ ಪ್ರೀಯರ ಅಪಾರ ಪ್ರಶಂಸೆಗೂ ಒಳಗಾಗಿದೆ.
ಪುತ್ತೂರಿನ ನಾಟ್ಯ ಪ್ರತಿಭೆ ಮಂಜುಳಾ ಸುಬ್ರಹ್ಮಣ್ಯ ಈ ವಿನೂತನ ಪ್ರಯತ್ನದ ಮೂಲಕ ಹಸ್ತ ಮುದ್ರಿಕೆಯಲ್ಲಿಯೇ ಇಡೀ ಭಾವಗೀತೆಗೆ ಜೀವತುಂಬುವ ಕೆಲಸ ಮಾಡಿದ್ದಾರೆ. ಕನ್ನಡದ ಕವಿ ಎಂ.ಎನ್. ವ್ಯಾಸರಾವ್ ಅವರ ‘ನೀನಿಲ್ಲದೆ ನನಗೇನಿದೇ’ ಎಂಬ ಭಾವಗೀತೆಯನ್ನು ಅಳವಡಿಸಿಕೊಂಡು ಹಸ್ತಗಳ ಚಲನೆ ಮೂಲಕ ‘ಹಸ್ತಾಭಿನಯ’ ನೋಡುಗರಿಗೆ ಮುದ ನೀಡುತ್ತಿದೆ.


ಕತ್ತಲು ಬೆಳಕಿನ ಆಟದಲ್ಲಿ ಈ ಹಸ್ತಾಭಿನಯವನ್ನು ವೀಡಿಯೋ ಮೂಲಕ ಸೆರೆ ಹಿಡಿಯಲಾಗಿದೆ. ಎಲ್‌ಇಡಿ ಸಣ್ಣ ಟಾರ್ಚ್ ಲೈಟ್‌ನ್ನು ಗೋಡೆ ಮೇಲೆ ಬೀಳುವಂತೆ ಅಳವಡಿಸಿಕೊಂಡು ಇಡೀ ಹಾಡಿಗೆ ಹಸ್ತಗಳನ್ನು ಭಾವನಾತ್ಮಕವಾಗಿ ಕುಣಿಸುವ ಮೂಲಕ ‘ಲಾಕ್ಡೌನ್ ಸ್ಪೆಷಲ್’ ನಾಟ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.
ಮಂಜುಳಾ ಸುಬ್ರಹ್ಮಣ್ಯ ಅವರ ನೃತ್ಯಗುರು ಉಡುಪಿಯ ಪ್ರತಿಭಾ ಸಾಮಗ ಅವರು ಕಳುಹಿಸಿದ ಹಸ್ತಮುದ್ರಿಕೆ ಮೂಲಕ ನೃತ್ಯಭಾವ ಮೂಡಿಸುವ ವಿಡಿಯೋ ಈ ವಿನೂತನ ಪ್ರಯತ್ನಕ್ಕೆ ಮಂಜುಳಾ ಸುಬ್ರಹ್ಮಣ್ಯ ಅವರಿಗೆ ಪ್ರೇರಣೆಯಂತೆ. ಇದೇ ರೀತಿ ಕೊಂಚ ವಿಭಿನ್ನವಾಗಿ ಯಾಕೆ ಮಾಡಬಾರದು ಎಂದು ಕೊಂಡ ಅವರು ನೀನಿಲ್ಲದೆ ನನಗೇನಿದೆ ಎಂಬ ಭಾವಗೀತೆಯನ್ನು ಆಯ್ದುಕೊಂಡು ಅದಕ್ಕೆ ಜೀವತುಂಬುವ ಕೆಲಸಕ್ಕೆ ಕೈ ಹಾಕಿದರು. ಲಾಕ್‌ಡೌನ್ ಹಿನ್ನಲೆಯಲ್ಲಿ ಪ್ರಸ್ತುತ ಆನ್‌ಲೈನ್ ಮೂಲಕ ಮನೆಯಿಂದಲೇ ಮಕ್ಕಳಿಗೆ ನಾಟ್ಯ ಕಲಿಸುತ್ತಿರುವ ಮಂಜುಳಾ ಸುಬ್ರಹ್ಮಣ್ಯ ಮೂರು ದಿನಗಳ ಶ್ರಮದೊಂದಿಗೆ ಕೇವಲ ಕೈಯ ಆಂಗಿಕ ಚಲನೆಯೊಂದಿಗೆ ಮಾಡಿರುವ ಈ ಹಸ್ತಾಭಿನಯ ಪ್ರಸ್ತುತ ನಾಟ್ಯ ಪ್ರೀಯರನ್ನು ಸೆಳೆದಿದೆ. ಮುಖದ ಭಾವನೆಗಳಿಲ್ಲದೆ, ಶರೀರದ ಬಳಕುಗಳಿಲ್ಲದೆ, ಕೇವಲ ಕೈಗಳಿಂದಲೇ ಗೀತೆಯ ಭಾವವನ್ನು ಅಭಿವ್ಯಕ್ತ ಪಡಿಸುವುದು ಅಷ್ಟೊಂದು ಸುಲಭ ಸಾಧ್ಯವಲ್ಲ. ಆದರೆ ಈ ವಿಡಿಯೋ ನೋಡಿದರೆ ಅದು ಕಷ್ಟ ಸಾಧ್ಯವಾಗಿದ್ದರೂ ಓರ್ವ ನಾಟ್ಯಪಟುವಾಗಿ ಮಂಜುಳಾ ಸುಬ್ರಹ್ಮಣ್ಯ ಅವರು ತಮ್ಮ ಸಾಹಸದಲ್ಲಿ ಗೆದ್ದಿರುವುದು ಸ್ಪಷ್ಟವಾಗಿದೆ. ಮುಖಭಾವ, ಶರೀರದ ಆಂಗಿಕ ಚಲನೆಯನ್ನು ಸಂಪೂರ್ಣವಾಗಿ ಬದಿಗಿಟ್ಟು ಭಾವಗೀತೆಯ ಆಶಯವನ್ನು ನೆರಳು ಬೆಳಕಿನ ಮೂಲಕ ಅಭಿವ್ಯಕ್ತ ಗೊಳಿಸಿದ ಈ ವಿನೂತನ ಹಸ್ತಾಭಿನಯದ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಬರಪೂರ ಪ್ರಶಂಸೆ ವ್ಯಕ್ತವಾಗಿದೆ. ಈ ಹಸ್ತಾಭಿನಯದ ವಿಡಿಯೋ ವನ್ನು ಮಂಜುಳಾ ಸುಬ್ರಹ್ಮಣ್ಯ ಅವರ ಅಣ್ಣ ಗಣೇಶ್ ಕುಮಾರ್ ಅವರು ನಿಕಾನ್ ಡಿ ೩೨೦೦ ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.