ಲಾಕಪ್ ಸಾವು: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಿರಂತರ ಧರಣಿ

ಕಲಬುರಗಿ,ಸೆ.14:ಶರಣಸಿರಸಗಿ ನಿವಾಸಿ ಉದಯಕುಮಾರ್ ತಂದೆ ಗನ್ನು ಕಾಳೆ ಅವರಿಗೆ ವಿಚಾರಣೆಯ ನೆಪದಲ್ಲಿ ಕರೆದೊಯ್ದ ಸಂದರ್ಭದಲ್ಲಿ ಸಾವಿಗೀಡಾದ ಪ್ರಕರಣದಲ್ಲಿನ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಸೆಪ್ಟೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮೃತರ ಕುಟುಂಬಸ್ಥರೊಂದಿಗೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಎ.ಬಿ. ಹೊಸಮನಿ ಅವರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಅಶೋಕ್ ನಗರ ಪೋಲಿಸ್ ಠಾಣೆಯ ಪಿಎಸ್‍ಐ ಶಿವಪ್ಪ, ಪೋಲಿಸ್ ಪೇದೆ ಶಿವಲಿಂಗಪ್ಪ ಹಾಗೂ ಇತರೆ ಮೂರು ಜನರು ಸೇರಿಕೊಂಡು ಕಳೆದ ಆಗಸ್ಟ್ 17ರಂದು ನನ್ನ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಮೃತರ ಪತ್ನಿ ಇಮಲಾಬಾಯಿ ಅವರು ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉದಯಕುಮಾರ್ ಅವರು ಹೃದಯ ಕಾಯಿಲೆಯಿಂದ ಮೃತರಾಗಿದ್ದಾರೆ ಎಂದು ನಗರ ಪೋಲಿಸ್ ಆಯುಕ್ತರು ಮಾಧ್ಯಮದವರ ಮುಂದೆ ತಪ್ಪು ಸಂದೇಶ ನೀಡಿದ್ದಾರೆ. ಜೊತೆಗೆ ಎಫ್‍ಐಆರ್ ದಾಖಲಿಸುವಲ್ಲಿ ಹತ್ತು ಗಂಟೆಗಳ ಕಾಲ ವಿಳಂಬ ಮಾಡಿದ್ದಾರೆ. ಸಿಐಡಿ ಪೋಲಿಸರು ತನಿಖೆ ಮಾಡುತ್ತಿದ್ದಾರೆ ಎಂದು ಕುಂಟು ನೆಪ ಹೇಳುತ್ತ ಒಂದು ತಿಂಗಳು ಗತಿಸಿದರೂ ಇದುವರೆಗೂ ಯಾವೊಬ್ಬ ಆರೋಪಿಯನ್ನು ಬಂಧಿಸಿಲ್ಲ ಮತ್ತು ಸೇವೆಯಿಂದ ಅಮಾನತ್ತು ಮಾಡಿಲ್ಲ. ಮೃತರ ಕುಟುಂಬಕ್ಕೆ ಸರ್ಕಾರ ನೀಡುವ ಪರಿಹಾರ ನೀಡುವಲ್ಲಿ ಪೋಲಿಸರು ಅಡ್ಡಗಾಲು ಹಾಕಿ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಆರೋಪಿಗಳನ್ನು ಕೂಡಲೇ ಬಂಧಿಸಿ ಅವರಿಗೆ ಸೇವೆಯಿಂದ ಅಮಾನತ್ತು ಮಾಡುವಂತೆ, ಮೃತರ ಕುಟುಂಬಕ್ಕೆ ಪರಿಹಾರ ನೀಡಿ ಸರ್ಕಾರದಿಂದ ಉದ್ಯೋಗ ಒದಗಿಸುವಂತೆ ಒತ್ತಾಯಿಸಿ ನಿರಂತರ ಧರಣಿ ಆರಂಭಿಸಲಾಗುವುದು. ಸಾಮಾಜಿಕ ಕಳಕಳಿಯುಳ್ಳ ಸಾರ್ವಜನಿಕರು ಹೋರಾಟದಲ್ಲಿ ಭಾಗವಹಿಸಿ ಮೃತರ ಕುಟುಂಬಸ್ಥರಿಗೆ ಸಾಮಾಜಿಕ ನ್ಯಾಯ ಕೊಡಿಸಬೇಕು ಎಂದು ಅವರು ಕೋರಿದ್ದಾರೆ.