ಲಾಕಡೌನ ಕಟ್ಟು ನಿಟ್ಟಿನ ಪಾಲನೆಗೆ ಪ್ರಯತ್ನ ಮಾಡಬೇಕು:ಹುಸೇನ್

ಸೈದಾಪುರ:ಜೂ.9:ಲಾಕ್‍ಡೌನ್ ಹಳ್ಳಿಗಳಲ್ಲಿ ಕೂಡ ಕಟ್ಟು ನಿಟ್ಟಾಗಿ ಜನ ಪಾಲಿಸುವಂತೆ ಮನವರಿಕೆ ಮಾಡಬೇಕು. ಗ್ರಾಮಗಳ ಹೊರವಲಯದ ಕಟ್ಟೆಗಳ ಮೇಲೆ ಜನ ಗುಂಪು ಸೇರದಂತೆ ತಿಳಿಸಬೇಕು. ಸ್ವಚ್ಚತೆ ಮತ್ತು ದೈಹಿಕ ಅಂತರವನ್ನು ತಪ್ಪದೇ ಎಲ್ಲರೂ ಪಾಲಿಸುವಂತೆ ಹಾಗೂ ಸಭೆ ಸಮಾರಂಭಗಳನ್ನು ಆಚರಿಸದಂತೆ ಮನವೊಲಿಸಬೇಕು ಎಂದು ಗುರುಮಠಕಲ್ ಆರಕ್ಷಕ ನಿರೀಕ್ಷಕ ಖಾಜಾ ಹುಸೇನ್ ಸಿಬ್ಬಂದಿ ವರ್ಗಕ್ಕೆ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಇಲ್ಲಿನ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಗಮನಿಸಿ ಮಾತನಾಡಿದರು. ಕೊರೊನಾ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯವರು ತಮ್ಮ ಸ್ವಂತ ಕುಟುಂಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ಹಿತವನ್ನು ಬಯಸುತ್ತಿದ್ದಾರೆ. ತಮ್ಮ ಮನೆಗಳಿಗೆ ವಾರಗಳು ಕಳೆದರೂ ಕೂಡ ಹೋಗದೆ ಸೇವೆಯನ್ನು ಮಾಡುತ್ತಿದ್ದಾರೆ.

 ಇಂತಹ ಸಮಯದಲ್ಲಿ ಬಹು ಎಚ್ಚರಿಕೆಯಿಂದ ಕೊರೊನಾ ಮುಂಜಾಗ್ರತ ಕ್ರಮಗಳನ್ನು ನಮ್ಮ ಸಿಬ್ಬಂದಿಯವರು ಕಟ್ಟು ನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಈ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಬಿಸಿ ಹಬೆಯನ್ನು ಮತ್ತು ಕಷಾಯವನ್ನು ಸಿಬ್ಬಂದಿಗಳ ಆರೋಗ್ಯದ ದೃಷ್ಠಿಯಿಂದ ನೀಡುತ್ತಿರುವುದು ಮೆಚ್ಚುವಂತಹದ್ದು. ಆದ್ದರಿಂದ ಸಾರ್ವಜನಿಕರು ಇಂತಹ ಸಂಕಷ್ಟದಲ್ಲಿ ಮನೆಯಿಂದ ಅನವಶ್ಯಕವಾಗಿ ಹೊರಗಡೆ ಬಾರದೆ ಪೊಲೀಸ್ ಸಿಬ್ಬಂದಿಗೆ ಸಹಕರಿಸಬೇಕು ಎಂದು ಹೇಳಿದರು. ಪಿಎಸ್‍ಐ ಭೀಮರಾಯ ಬಂಕ್ಲಿ, ಗ್ರಾಮಸ್ಥರಾದ ಕೆ.ಬಿ ರಾಜು, ಸೈಯದ್ ಅಲೀ, ಅಲ್ಲಾ ಭಾಷಾ ಸೇರಿದಂತೆ ಇತರರಿದ್ದರು.