ಲಾಕಡೌನ್ ಮಧ್ಯೆಯೂ ಸಮರೋಪಾದಿಯಲ್ಲಿ ಸಾಗಿದ ವಿಮಾನ ನಿಲ್ದಾಣ ಕಾಮಗಾರಿ: ಡಿಸಿಎಂ ಗೋವಿಂದ ಕಾರಜೋಳ ಮುತುವರ್ಜಿಗೆ ಜನರ ಮೆಚ್ಚುಗೆ

ವಿಜಯಪುರ, ಮೇ.31-ಬಸವ ನಾಡಿನ ಜನರ ಗಗನಯಾನ ಕನಸು ನನಸಾಗುವ ಸಮಯ ಹತ್ತಿರವಾಗುತ್ತಿದೆ. ಎಲ್ಲೆಡೆ ಕೊರೊನಾ ಎರಡನೇ ಅಲೆಯಿಂದಾಗಿ ಲಾಕಡೌನ್ ಜಾರಿಯಲ್ಲಿದ್ದರೂ ನಿರ್ಮಾಣ ಕಾಮಗಾರಿಳಿಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಿಗದಿತ ಸ್ಥಳದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಸಮರೋಪಾದಿಯಲ್ಲಿ ಸಾಗಿದೆ.
ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಡಿಸಿಎಂ ಗೋವಿಂದ ಕಾರಜೋಳ ಮತ್ತು ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳ ಸಮಗ್ರ ಪ್ರಯತ್ನದಿಂದಾಗಿ ಕಳೆದ ಸುಮಾರು ಒಂದು ದಶಕದಿಂದ ನನೆಗುದಿಗೆ ಬಿದ್ದಿದ್ದ ಈ ಕಾಮಗಾರಿ ಈಗ ಆರಂಭವಾಗಿದ್ದು, ಮೊದಲ ಹಂತದ ಕಾಮಗಾರಿ ನಿಗದಿತ ಸಮಯದೊಳಗೆ ಮುಗಿಸುವ ವಿಶ್ವಾಸವನ್ನು ಡಿಸಿಎಂ ಗೋವಿಂದ ಕಾರಜೋಳ ಮತ್ತು ಸಂಸದ ರಮೇಶ ಜಿಗಜಿಣಗಿ ಹೊಂದಿದ್ದಾರೆ.
ಈ ವಿಮಾನ ನಿಲ್ದಾಣ ಕಾಮಗಾರಿಯ 1.37 ಮೀ. ವಿಮಾನ ನಿಲ್ದಾಣದ ರನ್‍ವೇ ಫಾರ್ಮೇಶನ್ ರೆಡಿಯಾಗಿದೆ. ಒಳರಸ್ತೆಗಳು ಫಾರ್ಮೆಶನ್ ಕೂಡ ಸಿದ್ಧವಾಗಿದೆ. 300 ಮೀ. ಬಾಕ್ಸ್ ಫೌಂಡೇಶನ್ ರ್ಯಾಸ್ಕ್ ಫಾರ್ಮೇಶನ್ ಕೂಡ ಮುಗಿದಿದೆ. ಈ ರನವೇಗೆ ಅಗತ್ಯವಾಗಿರುವ ಹೊರ ರಸ್ತೆಗಳೂ ಕೂಡ ಬಹುತೇಕ ಮುಕ್ತಾಯವಾಗಲಿದೆ.
ವಿಮಾನ ನಿಲ್ದಾಣದಿಂದಾಗುವ ಲಾಭಗಳುಃ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಡಿಸಿಎಂ ಗೋವಿಂದ ಕಾರಜೋಳ ಈಗಾಗಲೇ ಹಲವಾರು ಬಾರಿ ಭೇಟಿ ನೀಡಿದ್ದು, ಸಂಸದ ರಮೇಶ ಜಿಗಜಿಣಗಿ ಕೂಡ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಅವರು ಜವಾಬ್ದಾರಿ ಸಚಿವರಾಗಿರುವ ಲೋಕೋಪಯೋಗಿ ಇಲಾಖೆಯಿಂದಲೇ ಈ ಕಾಮಗಾರಿ ಟೆಂಡರ್ ಮಾಡಲಾಗಿದ್ದು, ಈಗ ನಿರೀಕ್ಷೆಗೂ ಮೀರಿ ಕೆಲಸ ವೇಗವಾಗಿ ನಡೆಯುತ್ತಿದೆ.
ಈ ವಿಮಾನ ನಿಲ್ದಾಣದಿಂದ ಲೋಹದ ಹಕ್ಕಿಗಳು ಹಾರಾಟ ಆರಂಭಿಸಿದರೆ, ಬಸವ ನಾಡು ವಿಜಯಪುರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಭರಪೂರ ನೆರವಾಗಲಿದೆ. ಅದರಲ್ಲೂ ನಿಗದಿತ ಅವಧಿಯೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಈಗಾಗಲೇ ಡಿಸಿಎಂ ಗೋವಿಂದ ಕಾರಜೋಳ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದು, ಡಿಸಿಎಂ ಈ ಭಾಗದ ಅಭಿವೃದ್ಧಿಯ ಬಗ್ಗೆ ಹೊಂದಿರುವ ಪ್ರೀತಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಡೆದಿರುವ ವಿಮಾನ ನಿಲ್ದಾಣ ಕಾಮಗಾರಿಃ ಈ ಯೋಜನೆಯಿಂದ ವಿಜಯಪುರ ಜಿಲ್ಲೆಯ ರೈತರು ತಮ್ಮ ತೋಟಗಾರಿಗೆ ಬೆಳೆಗಳನ್ನು ದೇಶ, ವಿದೇಶಗಳಿಗೆ ರಫ್ತು ಮಾಡಲು ನೆರವಾಗಲಿದೆ. ಅಷ್ಟೇ ಅಲ್ಲ, ಮಾಜಿ ಸಚಿವ ಎಂ.ಬಿ.ಪಾಟೀಲ್ ಈ ಭಾಗದಲ್ಲಿ ನೀರಾವರಿ ಸೌಕರ್ಯ ಒದಗಿಸಿರುವುದರಿಂದ ಈ ಭಾಗದಲ್ಲಿ ಹೆಚ್ಚಾಗಿ ಕೈಗಾರಿಕೆಗಳ ಅಭಿವೃದ್ಧಿಯೂ ಸಾಧ್ಯವಾಗಲಿದ್ದು, ಉದ್ದಿಮೆದಾರರು ಹೊಸ ಹೊಸ ಉದ್ದಿಮೆಗಳನ್ನು ಈ ಭಾಗದಲ್ಲಿ ಸ್ಥಾಪಿಸಲು ವಿಮಾನ ನಿಲ್ದಾಣ ಪ್ರಮುಖ ಸಂಪರ್ಕ ಕೊಂಡಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಅಷ್ಟೇ ಅಲ್ಲ, ವಿಜಯಪುರ ಜಿಲ್ಲೆಯಲ್ಲಿರುವ ಈ ಭಾಗದಲ್ಲಿರುವ ಪ್ರಾಚೀನ ಸ್ಮಾರಕಗಳು, ಪ್ರವಾಸಿ ತಾಣಗಳಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರಲು ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾದ ಇತರೆ ಉದ್ಯಮಗಳು ಸೃಷ್ಠಿಯಾಗುವುದೂ ಖಚಿತವಾಗಿದೆ. ಮಹಾರಾಷ್ಟ್ರದ ಗಡಿಗೆ ವಿಜಯಪುರ ಜಿಲ್ಲೆ ಹೊಂದಿಕೊಂಡಿದ್ದರಿಂದ ನೆರೆಯ ಸೋಲಾಪುರದಲ್ಲಿ ವಿಮಾನ ನಿಲ್ದಾಣವಿದ್ದರೂ ಅದು ಇನ್ನೂ ಕಾರ್ಯಾರಂಭ ಮಾಡದಿರುವ ಹಿನ್ನೆಲೆಯಲ್ಲಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಹೆಚ್ಚಿನ ಮಹತ್ವ ಬಂದಿದೆ.
ವಿಜಯಪುರ ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಪ್ರವಾಸಿ ತಾಣಗಳಿದ್ದು, ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್ ಸೇರಿದಂತೆ 53 ಸಂರಕ್ಷಿತ ಸ್ಮಾರಕಗಳಿದ್ದು, ಇವುಗಳ ಜೊತೆಗೆ ಶಿವಗಿರಿಯಲ್ಲಿರುವ ಎತ್ತರದ ಶಿವನ ಮೂರ್ತಿ, ಆಲಮಟ್ಟಿ ಜಲಾಷಯಗಳೂ ಇರುವುದರಿದಂ ಪ್ರವಾಸಿಗರನ್ನು ಕೈಬೀಸಿ ಕರೆಯಲು ಈ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ. ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಕೂಡಲ ಸಂಗಮ, ಚಿಕ್ಕಸಂಗಮ ಪ್ರವಾಸಿ ತಾಣಗಳೂ ಈ ವಿಮಾನ ನಿಲ್ದಾಣದಿಂದ ಸಮೀಪ ಇರುವುದರಿಂದ ಬಾಗಲಕೋಟೆ ಜಿಲ್ಲೆಯಲ್ಲಿಯೂ ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಪೂರಕವಾಗಲಿದೆ.
ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯ ರಾಜ್ಯ ಒಟ್ಟು ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಶೇ. 13.50 ಯಷ್ಟು ಕೊಡುಗೆಯನ್ನು ನೀಡುತ್ತಿದೆ. ಇದರಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ ಪ್ರಮುಖ ತೋಟಗಾರಿಕೆ ಬೆಳೆಗಳಾಗಿದ್ದು, ಇವುಗಳನ್ನು ಬೆಳೆದು ತ್ವರಿತ ಸಾಗಾಟ ಮತ್ತು ಮಾರಾಟಕ್ಕೆ ತೊಂದರೆ ಎದುರಿಸುತ್ತಿರುವ ರೈತರಿಗೆ ಈ ವಿಮಾನ ನಿಲ್ದಾಣ ವರದಾನವಾಗಲಿದೆ. ವಿಮಾನಗಳ ಮೂಲಕ ಕಾರ್ಗೋ ಸೇವೆ ಬಳಸಿ ಇಲ್ಲಿನ ರೈತರು ತಮ್ಮ ತೋಟಗಾರಿಕೆ ಉತ್ಪನ್ನಗಳನ್ನು ಸಾಗಾಟ ಮಾಡಲು ಅನುಕೂಲವಾಗಲಿದೆ. ಅಷ್ಟೇ, ಅಲ್ಲ, ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ದರವೂ ಇದರಿಂದ ಲಭ್ಯವಾಗಲಿದೆ.
ವಿಜಯಪುರ ಜಿಲ್ಲೆಯಲ್ಲಿಯೇ ಇರುವ ಕೂಡಗಿ ಎನ್.ಟಿ.ಪಿ.ಸಿಗೂ ಈ ವಿಮಾನ ನಿಲ್ದಾಣ ಸಹಕಾರಿಯಾಗಲಿದ್ದು, ದೇಶ ಮತ್ತು ವಿದೇಶಗಳಿಂದ ಬರುವ ವಿಜ್ಞಾನಿಗಳಿಗೂ ಸುಗಮ ಸಂಚಾರಕ್ಕೆ ಇದರಿಂದ ಅನುಕೂಲವಾಗಲಿದೆ.
ಇನ್ನು ಕೇವಲ ಆರೇಳು ತಿಂಗಳಲ್ಲಿ ಈ ವಿಮಾನ ನಿಲ್ದಾಣದ ಮೊದಲ ಹಂತದ ಕಾಮಗಾರಿ ಪೂರ್ಣವಾಗುವ ನಿರೀಕ್ಷೆಯಿದ್ದು, ಲೋಹದ ಹಕ್ಕಿಗಳಲ್ಲಿ ಕುಳಿತು ಗಗನಯಾನ ಮಾಡಬೇಕು ಎಂಬ ಕನಸು ಹೊಂದಿರುವ ಬಸವ ನಾಡಿನ ಜನತೆ ಇದರಿಂದ ತಮ್ಮ ಜಿಲ್ಲೆಯಿಂದಲೇ ಪ್ರಯಾಣ ಮಾಡಲು ಈ ಯೋಜನೆ ಬಹುಪಯೋಗಿ ಎಂದರೆ ತಪ್ಪಾಗಲಾರದು.