ಲಸಿಕೆ : ೪ ಕೋಟಿ ಜನರ ನಿರಾಸಕ್ತಿ

ನವದೆಹಲಿ,ಜು.೨೩- ಬೂಸ್ಟರ್ ಡೋಸ್ ಸೇರಿದಂತೆ, ಲಸಿಕೆ ನೀಡಲು ಸರ್ಕಾರದ ಬಳಿ ಲಸಿಕೆ ಲಭ್ಯವಿದ್ದರೂ ದೇಶದಲ್ಲಿ ಅಂದಾಜು ನಾಲ್ಕು ಕೋಟಿ ಅರ್ಹ ಜನರು ಇನ್ನೂ ಮೊದಲ ಡೋಸ್ ಲಸಿಕೆ ಪಡೆದಿಲ್ಲ ಎನ್ನುವ ಸಂಗತಿ ಬಯಲಾಗಿದೆ

“ಜುಲೈ ೧೮ರ ವೇಳೆಗೆ ಅಂದಾಜು ೪ ಕೋಟಿ ಜನ ಮೊದಲ ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡಿಲ್ಲ” ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.

ಇದುವರೆಗೆ ನೀಡಲಾದ ಒಟ್ಟು ೨೦೧ ಕೋಟಿ ಡೋಸ್‌ಗಳಲ್ಲಿ ಶೇ.೯೭ ಕ್ಕಿಂತ ಹೆಚ್ಚು ಲಸಿಕೆಯನ್ನು ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗಿದೆ. ಇತ್ತೀಚೆಗೆ, ಕೇಂದ್ರ ಸರ್ಕಾರ ಎಲ್ಲಾ ಅರ್ಹ ವಯಸ್ಕರಿಗೆ ಉಚಿತ ಬೂಸ್ಟರ್ ಶಾಟ್ ನೀಡಲು ೭೫ ದಿನಗಳ ಸುದೀರ್ಘ ವಿಶೇಷ ಅಭಿಯಾನ ಆರಂಭಿಸಿದೆ ಎಂದಿದ್ದಾರೆ.

ದೇಶಾದ್ಯಂತ ಒಟ್ಟು ಸುಮಾರು ೬.೭೭ ಕೋಟಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗಿದೆ. ವಿಶೇಷ ಅಭಿಯಾನದ ಮೊದಲು, ಆರೋಗ್ಯ ಕಾರ್ಯಕರ್ತರು ಮುಂಚೂಣಿಯ ಕಾರ್ಯಪಡೆ ಸಿಬ್ಬಂಧಿ ಮತ್ತು ಎಲ್ಲಾ ಫಲಾನುಭವಿಗಳಿಗೆ ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಮತ್ತು ೧೮-೫೯ ವರ್ಷ ವಯಸ್ಸಿನವರಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಲಸಿಕೆ ಕೇಂದ್ರಗಳಲ್ಲಿ ೧೮ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಹೆಚ್ಚುವರಿ ಡೋಸ್‌ಗಳನ್ನು ನೀಡುವ ೭೫ ದಿನಗಳ ಅಭಿಯಾನಜುಲೈ ೧೫ ರಿಂದ ಪ್ರಾರಂಭವಾಗಿದೆ ಅರ್ಹ ಜನಸಂಖ್ಯೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಡೋಸ್‌ಗಳನ್ನು ಹೆಚ್ಚಿಸುವ ಉದ್ದೇಶದಿಂದ ’ಕೋವಿಡ್ ವ್ಯಾಕ್ಸಿನೇಷನ್ ಅಮೃತ್ ಮಹೋತ್ಸವ’ ಚಾಲನೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.