ಲಸಿಕೆ ಹೊಸ ನೋಂದಣಿಗಿಲ್ಲ ಅವಕಾಶ


ನವದೆಹಲಿ, ಏ.೪- ಕೋವಿಡ್-೧೯ ಸಂಬಂಧಿಸಿದಂತೆ ಆರೋಗ್ಯ ವಲಯ ಮತ್ತು ಮುಂಚೂಣಿ ಕಾರ್ಯಕರ್ತರು ಕೊರೋನಾ ಲಸಿಕೆ ಪಡೆಯಲು ಹೊಸದಾಗಿ ನೋಂದಣಿ ಪ್ರಕ್ರಿಯೆಗೆ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಕೆಲವು ಆರೋಗ್ಯ ವಲಯ ಮತ್ತು ಮುಂಚೂಣಿ ವಲಯಗಳಲ್ಲಿ ಕೆಲಸ ಮಾಡುವವರು ಅನರ್ಹ ಫಲಾನುಭವಿಗಳಾಗಿದ್ದು ನಿಯಮ ಉಲ್ಲಂಘಿಸಿ ಕೋವಿಡ್-೧೯ ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಸಿಕೊಳ್ಳುತ್ತಾರೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ಬಗ್ಗೆ ಪತ್ರ ಹೊರಡಿಸಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಯಿತು. ಲಸಿಕೆ ಪಡೆಯಲು ನೋಂದಣಿ ದಿನಾಂಕವನ್ನು ಈಗಾಗಲೇ ಅನೇಕ ಬಾರಿ ಮುಂದೂಡಲಾಗಿದೆ.
ನಂತರ ಫೆಬ್ರವರಿ ೨೫ರಂದು ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮಾರ್ಚ್ ೬ರಂದು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಗಾಗಿ ನೋಂದಣಿ ಮಾಡಿಸಿಕೊಳ್ಳಲು ಕೊನೆಯ ದಿನಾಂಕ ಎಂದು ತಿಳಿಸಲಾಗಿತ್ತು. ಜತೆಗೆ ೬೦ ವರ್ಷಕ್ಕಿಂತ ಹೆಚ್ಚಿನವರಿಗೆ ಲಸಿಕೆ ನೀಡುವ ಸಂದರ್ಭದಲ್ಲೂ ಈ ಎರಡು ವರ್ಗಕ್ಕೆ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ನೀಡಲಾಗಿತ್ತು.
ಆದರೆ, ಈ ನಡುವೆ ದೇಶದ ನಾನಾ ಮೂಲೆಗಳಿಂದ ಲಸಿಕೆಯ ದುರುಪಯೋಗವಾಗುತ್ತಿರುವ ಕುರಿತು ಮಾಹಿತಿ ಬಂದಿದೆ. ಅನೇಕ ಲಸಿಕಾ ಕೇಂದ್ರಗಳಲ್ಲಿ ಅನರ್ಹ ವ್ಯಕ್ತಿಗಳು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ಸೋಗಿನಲ್ಲಿ ಲಸಿಕೆ ಪಡೆದಿರುವುದು ಗಮನಕ್ಕೆ ಬಂದಿದ್ದು ಇದು ಸಂಪೂರ್ಣವಾಗಿ ನಿಯಮಬಾಹಿರವಾಗಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರ ನೋಂದಣಿ ಸಂಖ್ಯೆಯಲ್ಲಿ ಧಿಡೀರನೆ ಶೇಕಡಾ ೨೪ರಷ್ಟು ಹೆಚ್ಚಳ ಕಂಡುಬಂದಿದೆ. ಈ ಸಂಬಂಧ ತಜ್ಞರ ಸಭೆಯಲ್ಲಿ ಚರ್ಚಿಸಿದಾಗ ನಾನಾ ರಾಜ್ಯಗಳಲ್ಲಿ ನಡೆಯುತ್ತಿರುವ ನಿಯಮಬಾಹಿರ ಪ್ರಕರಣಗಳು ಬೆಳಕಿಗೆ ಬಂದವು. ಆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಯಾವುದೇ ಸಮಸ್ಯೆ ಇಲ್ಲದೆ ಲಸಿಕೆ ದೊರೆಯಲಿದೆ. ಜೊತೆಗೆ ೪೫ ವರ್ಷಕ್ಕಿಂದ ಮೇಲ್ಪಟ್ಟ ಎಲ್ಲರಿಗೂ ಈಗಿನಂತೆಯೇ ಲಸಿಕಾ ಕಾರ್ಯಕ್ರಮ ಮುಂದುವರೆಯಲಿದೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಇನ್ನು, ೪೫ ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಸಿಕೊಳ್ಳಿ. ಆರೋಗ್ಯ ವಲಯ ಮತ್ತು ಕೋವಿಡ್ ಮುಂಚೂಣಿ ವಲಯದಲ್ಲಿ ಕೆಲಸ ಮಾಡುವ ಎಲ್ಲರಿಗೂ ಈಗಾಗಲೇ ಲಸಿಕೆ ಹಾಕಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ಅಲ್ಲದೆ, ಜನವರಿ ೧೬ರಂದು ದೇಶಾದ್ಯಂತ ಕೊರೋನಾ ವಿರುದ್ಧ ಲಸಿಕೆ ಅಭಿಯಾನ ಆರಂಭಗೊಂಡಿತ್ತು. ಆರಂಭದಲ್ಲಿ ಆರೋಗ್ಯ ಸೇವೆ ವಲಯದಲ್ಲಿ ಕೆಲಸ ಮಾಡುವವರಿಗೆ ನೀಡಲಾಗಿತ್ತು. ನಂತರ ಫೆಬ್ರವರಿ ೨ರಂದು ಕೋವಿಡ್ ಮುಂಚೂಣಿ ವಲಯದಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗಿತ್ತು.
ಮುಂದಿನ ಹಂತದ ಕೊರೋನಾ ಲಸಿಕೆ ನೀಡುವ ಅಭಿಯಾನ ಮಾರ್ಚ್ ೧ರಂದು ಆರಂಭವಾಗಿ ೬೦ ವರ್ಷಕ್ಕೆ ಮೇಲ್ಪಟ್ಟ ಮತ್ತು ಯಾವುದಾದರೂ ಆರೋಗ್ಯ ಸಮಸ್ಯೆ ಇರುವ ೪೫ ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಕಡ್ಡಾಯ ಮಾಡಿತು ಎಂದಿದ್ದಾರೆ.