ಲಸಿಕೆ ಹಾಕಿಸ್ಕೊ ಅಂದ್ರೆ ಜೀವಕ್ಕೆ ಗ್ಯಾರಂಟಿ ಕೇಳಿ ಪೊಲೀಸ್ ರ ಅತಿಥಿಯಾದ

ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ. 23 :- ಕೋವಿಡ್ ಲಸಿಕೆ ಹಾಕಿಸ್ಕೊ ಅಂದ್ರೆ ನನ್ನ ಜೀವಕ್ಕೆ ಗ್ಯಾರಂಟಿ ಕೊಡ್ತೀರಾ ಎಂದು ಹೇಳಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕಾಲಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ  ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವಕನೋರ್ವ ಈಗ ಪೊಲೀಸರ ಬಂಧನದಲ್ಲಿರುವ ಘಟನೆ ಕೂಡ್ಲಿಗಿ ಪೊಲೀಸ್ ಠಾಣಾ ಸರಹದ್ದಿನ ಸಂಡೂರು ತಾಲೂಕು ಹಿರೇಕೆರೆಯಾಗಿನಹಳ್ಳಿ ಗ್ರಾಮ ಪಂಚಾಯತಿಯ ಗಂಗೆಭಾವಿ ಹತ್ತಿರ ಬುಧವಾರ ಮಧ್ಯಾಹ್ನ ಜರುಗಿದೆ. 
ಹಿರೇಕೆರೆಯಾಗಿನಹಳ್ಳಿಯ ಎಲೆಕ್ಟ್ರಿಷನ ಕೆಲಸಮಾಡುತ್ತಿರುವ ಚನ್ನಬಾಲಪ್ಪ (26) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಬಂಡ್ರಿಗ್ರಾಮದ   ಪ್ರಾಥಮಿಕ ಆರೋಗ್ಯ ಕೇಂದ್ರದಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಹೆಚ್ ಎಂ ಅರುಣಾ ತಮ್ಮ ಸಿಬ್ಬಂದಿಗಳೊಂದಿಗೆ ಸರ್ಕಾರದ ಆದೇಶದಂತೆ ಉಚಿತ ಕೋವಿಡ್ ಲಸಿಕೆ ಹಾಕಲು ಹಿರೇಕೆರೆಯಾಗಿನಹಳ್ಳಿಗೆ ಬಂದು ತಮ್ಮ ಕರ್ತವ್ಯ ನಿರ್ವಹಿಸುತ್ತಿರುವಾಗ ಚನ್ನಬಾಲಪ್ಪನಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದಾಗ ನಾನು ಕೋವಿಡ್ ಲಸಿಕೆ ಹಾಕಿಸುವುದಿಲ್ಲ ನನ್ನ ಜೀವಕ್ಕೆ ಗ್ಯಾರಂಟಿ ಕೊಡ್ತೀರಾ ಕೊರೋನಾ ಹೆಚ್ಚಾದರೆ ನಿಮ್ಮದೇನು ಹೋಗುತ್ತೆ ಎಂದು ಕೋವಿಡ್ ನಿಯಮ ಉಲ್ಲಂಘಿಸಿದ್ದಲ್ಲದೆ ಆರೋಗ್ಯ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಹೊಡೆದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆಂದು ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಅರುಣಾ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಕೂಡ್ಲಿಗಿ ಠಾಣಾ (ತನಿಖೆ) ಪಿಎಸ್ಐ ಮಾಲಿಕ್ ಸಾಬ್ ಕಲಾರಿ ಆರೋಪಿ ಚನ್ನಬಾಲಪ್ಪನನ್ನು ಬಂಧಿಸಿದ್ದಾರೆ.