ಲಸಿಕೆ ಹಾಕಿಸಿ, ಮಕ್ಕಳನ್ನು ರೋಗಗಳಿಂದ ರಕ್ಷಿಸಿ

ಕೋಲಾರ,ಆ,೧೬- ಮಾರಕ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ರೋಗ ಬಾರದಂತೆ ತಡೆಯಲು ಆರೋಗ್ಯ ಇಲಾಖೆ ಉಚಿತವಾಗಿ ನೀಡುತ್ತಿರುವ ಲಸಿಕೆ ಹಾಕಿಸಿಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಹಿರಿಯ ಸಮುದಾಯ ಆರೋಗ್ಯಾಧಿಕಾರಿ ವಾಣಿ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ೧೦ನೇ ತರಗತಿ ಮಕ್ಕಳಿಗೆ ಡಿಪಿಟಿ ಧನುರ್ವಾಯು, ನಾಯಿಕೆಮ್ಮು, ಗಂಟಲಮಾರಿ ರೋಗಗಳ ತಡೆಗಾಗಿ ಆರೋಗ್ಯ ಇಲಾಖೆಯಿಂದ ಲಸಿಕೆ ಹಾಕುವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿವಿಧ ಲಸಿಕೆಗಳಿಂದ ಅನೇಕ ಮಾರಣಾಂತಿಕ ಕಾಯಿಲೆಗಳಿಂದ ಮುಕ್ತಿ ಸಿಕ್ಕಿದೆ ಎಂದರು.
ಮಾರಕ ರೋಗಗಳ ತಡೆಗೆ ಅನೇಕ ಲಸಿಕೆಗಳನ್ನು ಪುಟ್ಟ ಮಕ್ಕಳಿರುವಾಗಲಿಂದಲೇ ನೀಡುತ್ತಿದ್ದು, ಇದೀಗ ೧೫ ವರ್ಷ ತುಂಬಿದವರಿಗೆ ಡಿಪಿಟಿ ಲಸಿಕೆ ನೀಡುವ ಮೂಲಕ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ರೋಗಗಳು ಬಾರದಂತೆ ತಡೆಯಬಹುದಾಗಿದೆ ಎಂದು ತಿಳಿಸಿದರು.
ಮಕ್ಕಳಿಗೆ ಕಾಲಕಾಲಕ್ಕೆ ಅಗತ್ಯವಾದ ಜಂತುಹುಳು ನಿರೋಧಕ ಮಾತ್ರೆ ನೀಡುತ್ತಿರುವ ಕುರಿತು ಅವರು ಖಾತ್ರಿಪಡಿಸಿಕೊಂಡರು.
ಮುಖ್ಯಶಿಕ್ಷಕಿ ಹೆಚ್.ಸಿದ್ದೇಶ್ವರಿ ಮಾತನಾಡಿ, ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ,ಕ್ಷೀರಭಾಗ್ಯ,ಉಚಿತ ಪಠ್ಯ,ಸಮವಸ್ತ್ರದ ಜತೆಗೆ ಶಾಲೆಗೆ ಬಂದು ನಿಮ್ಮ ಆರೋಗ್ಯ ರಕ್ಷಣೆಗೂ ಒತ್ತು ನೀಡುತ್ತಿದ್ದು ಈ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ, ಉತ್ತಮ ಆರೋಗ್ಯ ಹೊಂದಿ ಶಾಲೆಗೆ ಗೈರಾಗದಿರಿ ಜೀವನದಲ್ಲಿ ಸಾಧಕರಾಗಿ ಹೊರಹೊಮ್ಮಿ ಎಂದು ಕಿವಿಮಾತು ಹೇಳಿದರು.
ಸರ್ಕಾರ ಶಾಲಾ ಮಕ್ಕಳ ಆರೋಗ್ಯಕ್ಕೆ ನೀಡುತ್ತಿರುವ ಆದ್ಯತೆ ಶ್ಲಾಘನೀಯವಾಗಿದ್ದು, ಈ ಸೌಲಭ್ಯಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಿ, ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ,ವೆಂಕಟರೆಡ್ಡಿ, ಶ್ವೇತಾ, ಸುಗುಣಾ,ಫರೀದಾ, ಶ್ರೀನಿವಾಸಲು, ಡಿ.ಚಂದ್ರಶೇಖರ್,ರಮಾದೇವಿ ಆಶಾ ಕಾರ್ಯಕರ್ತೆಯರಾದ ಅರುಣಮ್ಮ ಮತ್ತಿತರರಿದ್ದರು.