ಲಸಿಕೆ ಹಾಕಿಸಿಕೊಂಡಿದ್ದರೆ ಮಾತ್ರ ಡಿಸಿ ಆಫೀಸಿನ ಒಳಗಡೆ ಪ್ರವೇಶ

ಸಂಜೆವಾಣಿ ವಾರ್ತೆ
ಕೊಪ್ಪಳ ಸೆ 07 : ಕರೊನಾ ತಡೆ ಹಾಗೂ ನಿಯಂತ್ರಣ ಹಿನ್ನೆಲೆಯಲ್ಲಿ ಬೃಹತ್ ಲಸಿಕೆ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ದೊಡ್ಡ ಪ್ರಮಾಣದಲ್ಲೇ ಲಸಿಕೀಕರಣ ನಡೆದಿದೆ. ಅದಾಗ್ಯೂ ಇನ್ನೂ ಲಸಿಕೆ ಹಾಕಿಸಿಕೊಂಡಿರದವರು ಬಹಳಷ್ಟು ಮಂದಿ ಇದ್ದಾರೆ. ಇನ್ನೂ ಲಸಿಕೆ ಹಾಕಿಸಿಕೊಂಡಿರದಿದ್ದವರನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಕೆಲ ಅಧಿಕಾರಿಗಳು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.ಅಂಥವರ ಪೈಕಿ ಇಲ್ಲೊಬ್ಬರು ಜಿಲ್ಲಾಧಿಕಾರಿಯೂ ಸೇರಿದ್ದಾರೆ.
ಸಾರ್ವಜನಿಕರು ಲಸಿಕೆ ಪಡೆದಿದ್ದರೆ ಮಾತ್ರ ಕಚೇರಿಗೆ ಪ್ರವೇಶ ನೀಡುವಂತೆ ಕೊಪ್ಪಳದ ಜಿಲ್ಲಾಧಿಕಾರಿಯವರು ತಮ್ಮ ಅಧಿಕಾರಿ-ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ. ಹೀಗಾಗಿ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರು ಲಸಿಕೆ ಪಡೆದ ಪ್ರಮಾಣಪತ್ರ ಹೊಂದಿದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ನಿತ್ಯ ಸಾವಿರಾರು ಜನರು ಕೆಲಸಕ್ಕಾಗಿ ಡಿಸಿ ಕಚೇರಿಗೆ ಬರುತ್ತಾರೆ. ಆದರೆ, ಲಸಿಕೆ ಪಡೆಯುತ್ತಿಲ್ಲ. ಕೆಲವರು ಪಡೆದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಇದಕ್ಕಾಗಿ ಪರೀಕ್ಷೆ ಮಾಡಿ ಒಳಗೆ ಬಿಡಲಾಗುತ್ತಿದೆ. ಬಂದವರು ಲಸಿಕೆ ಪಡೆದ ಬಗ್ಗೆ ಪ್ರಮಾಣಪತ್ರ ತೋರಿಸಬೇಕು. ಜತೆಗೆ ಆಧಾರ್ ಕಾರ್ಡ್ ತೋರಿಸಬೇಕು. ಲಸಿಕೆ ಪಡೆಯದಿದ್ದಲ್ಲಿ ಪಕ್ಕದಲ್ಲೇ ಇರುವ ಲಸಿಕಾ ಕೇಂದ್ರದಲ್ಲಿ ಪಡೆದ ನಂತರ ಒಳ ಬಿಡಲಾಗುತ್ತಿದೆ. ಕೆಲವರು ಡಿಸಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದರೆ, ಇನ್ನು ಕೆಲವರು ಈ ರೀತಿ ಮಾಡುವುದು ಸರಿಯಲ್ಲವೆಂದು ಹೇಳುತ್ತಿದ್ದಾರೆ. ಕೆಲವರು ಗೊಣಗಿಕೊಳ್ಳುತ್ತಲೇ ಲಸಿಕೆ ಪಡೆಯುತ್ತಿದ್ದಾರೆ.ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಯಾವುದೇ ನಿರ್ಬಂಧ ಹೇರದೆ ಜಾಗೃತಿ ಮೂಡಿಸುವ ಅಭಿಯಾನದ ಮೂಲಕ ಕೋವಿಡ್ ಲಸಿಕೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಇತ್ತೀಚೆಗಷ್ಟೇ ಸುತ್ತೋಲೆಯೊಂದನ್ನು ಹೊರಡಿಸಿ, ಎಲ್ಲ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅದಾಗ್ಯೂ ಕೊಪ್ಪಳ ಜಿಲ್ಲಾಧಿಕಾರಿಯವರು ಕಚೇರಿ ಪ್ರವೇಶಕ್ಕೂ ಲಸಿಕೆ ಪ್ರಮಾಣಪತ್ರ ಕಡ್ಡಾಯ ಎನ್ನುವ ಮೂಲಕ ಸರ್ಕಾರದ ಸೂಚನೆಯನ್ನೇ ಧಿಕ್ಕರಿಸಿದ್ದಾರೆ ಎಂದು ಕೆಲವರು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.