ಲಸಿಕೆ ಸಿಗಲಿ, ಕೊರೊನಾ ತೊಲಗಲಿ

ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಡಾ. ಮಂಜುನಾಥ್ ಆಶಯ
ಮೈಸೂರು,ಅ. ೧೭- ಕೊರೋನಾ ಸೋಂಕು ಕಳಂಕದ ರೋಗವಲ್ಲ ಆತಂಕದ ರೋಗ ಅಷ್ಟೆ.ಈ ಬಗ್ಗೆ ಭಯ ಬೇಡ,ಮುನ್ನೆಚ್ಚರಿಕೆ ವಹಿಸಿ ಎಂದು ಸಲಹೆ ನೀಡಿರುವ ನಾಡಿನ ಹೆಸರಾಂತ ಹೃದ್ರೋಗ ತಜ್ಞ ಡಾ. ಸಿ.ಎನ್ ಮಂಜುನಾಥ್ ಅವರು ಇಡೀ ವಿಶ್ವವೇ ಕೋರೋನಾ ಸೋಂಕಿನಿಂದ ಮುಕ್ತವಾಗಲಿ ಎಂದು ನಾಡದೇವತೆ ಚಾಮುಂಡೇಶ್ವರಿಗೆ ಬೇಡಿಕೊಂಡಿದ್ದಾರೆ.

ಕೊರೋನಾಗೆ ಶೀಘ್ರದಲ್ಲೆ ಲಸಿಕೆ ಸಿಗಬೇಕು. ಜಗತ್ತಿನಲ್ಲೇ ಕೊರೋನಾ ನಿವಾರಣೆಯಾಗಬೇಕು. ಜಲಪ್ರವಾಹ ನಿಲ್ಲಬೇಕು ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ.ಲಸಿಕೆ ಸಿಗುವ ತನಕ ಸೋಂಕು ತಡೆಗಟ್ಟಲು ಸರ್ಕಾರ ಇನ್ನಷ್ಟು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ

ಈ ವರ್ಷ ಕೊರೋನಾಗೆ ಲಸಿಕೆ ಬರುವ ಸಾಧ್ಯತೆ ಇಲ್ಲ. ಮುಂದಿನ ವರ್ಷ ಲಸಿಕೆ ಸಿಗಲಿದೆ. ಅಲ್ಲಿಯವರಗೆ ನಾವು ನಿಯಮ ಪಾಲಿಸಿಕೊಂಡೇ ಕೊರೋನಾ ವಿರುದ್ದ ಹೋರಾಡಬೇಕು ಎಂದು ಅವರು ನಾಡಿನ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸೇರಿದಂತೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಧಿಕೃತವಾಗಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೋನಾ ಸೋಂಕಿತರನ್ನು ಬೇರೆಯದೇ ರೀತಿಯಲ್ಲಿ ನೋಡಲಾಗುತ್ತಿದೆ. ಕಾಲ ಬದಲಾಗಿಲ್ಲ. ಜನ ಬದಲಾಗಿದ್ದಾರೆ. ಜೀವನ ಶೈಲಿ ಬದಲಾಗಿದೆ. ನಾವು ಚಂದ್ರ, ಮಂಗಳಯಾನದ ಬಗ್ಗೆ ಮಾತನಾಡುತ್ತಿದ್ದೇವೆ. ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ. ಫೇಸ್‌ಬುಕ್‌ನಲ್ಲೇ ಗೆಳೆಯರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರುತ್ತೇವೆ. ಆದರೆ ನಿಜವಾದ ಸ್ನೇಹಿತರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ವಿಷಾಸಿದರು.

ಸಾಮಾಜಿಕ ಜಾಲತಾಣ ಸಮಾಜದ ಆರೋಗ್ಯ ಹಾಳು ಮಾಡುತ್ತಿವೆ. ಮಾನವನ ಶರೀರ ಐಸ್ ಕ್ರೀಂ ಇದ್ದಂತೆ. ಒಳ್ಳೆಯದ್ದು ಮಾಡಿದ್ರು ಕರಗುತ್ತೆ ಕೆಟ್ಟದ್ದು ಮಾಡಿದ್ರು ಕರಗುತ್ತೆ. ಆದರೆ ನಮ್ಮ ದೇಹ ಒಳ್ಳೆಯ ಕೆಲಸಗಳಿಗೆ ಕರಗಲಿ. ನಮ್ಮಿಂದ ಇನ್ನೊಬ್ಬರಿಗೆ ಸಹಾಯವಾಗಲಿ ಎಂದು ಹೇಳಿದ್ದಾರೆ.

ವೈದ್ಯರು ಮನೆಯಲ್ಲಿ ಪೂಜೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಗಂಭೀರ ರೋಗಿಗಳ ಪರವಾಗಿ ಎಷ್ಟು ವೈದ್ಯರು ಹರಕೆ ಕಟ್ಟಿಕೊಂಡಿದ್ದಾರೆ ರೋಗಿಯ ಆರೋಗ್ಯವೇ ನನ್ನ ಭಾಗ್ಯ ಎಂದು ನಂಬಿದ ವೈದ್ಯರಿದ್ದಾರೆ. ಹೀಗಾಗಿ ಯಾವುದೇ ವೈದ್ಯರ ಮೇಲೆ ಹಲ್ಲೆ ಗಳನ್ನು ಮಾಡಬೇಡಿ ಎಂದು ಅವರು ಮನವಿ ಮಾಡಿದರು.

ಕೊರೋನಾದಿಂದ ವೈದ್ಯರೇ ರೋಗಿಗಳಾಗುತ್ತಿದ್ದಾರೆ. ವೈದ್ಯರ ಮೇಲೆ ಹಲ್ಲೆ ಮಾಡಿದರೆ ವೈದ್ಯ ವೃತ್ತಿ ಬೇರೆ ದಾರಿ ಹಿಡಿಯುತ್ತದೆ. ಜನರು ಅರ್ಥ ಮಾಡಿಕೊಳ್ಳಬೇಕು. ವೈದ್ಯರು ಮನುಷ್ಯರೇ. ಗ್ರಾಮೀಣ ಆಸ್ಪತ್ರೆಗಳನ್ನು ಜಿಲ್ಲಾ ಕೇಂದ್ರಗಳಿಂದ ನಿರ್ವಹಣೆ ಮಾಡಬೇಕು ಎಂದರು.

ಮಾಸ್ಕ್ ತೆಗೆಯಬೇಡಿ;

ಮಾತನಾಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಾಸ್ಕ್ ತೆಗೆಯಬೇಡಿ. ಪರಿಸರದ ವಿರುದ್ಧ ಹೋದರೆ ಏನಾಗುತ್ತೆ ಎನ್ನುವುದನ್ನು ಕೊರೋನಾ ತೋರಿಸಿಕೊಟ್ಟಿದೆ. ಮಾಡಬಾರದ್ದನ್ನ ಮಾಡಿದರೆ ಆಗಬಾರದು ಆಗುತ್ತೆ ಅನ್ನೋದಕ್ಕೆ ಈ ಬೆಳವಣಿಗೆಯಿಂದ ತಿಳಿಯಬೇಕು. ಕೊರೋನಾ ನಿಯಂತ್ರಣಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸಿಎಂ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರದ ಮುತುವರ್ಜಿಯಿಂದ ಎಲ್ಲಾ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಿದ್ರೆ ಆದಷ್ಟು ಬೇಗ ಕೊರೋನಾ ನಿಯಂತ್ರಣ ಮಾಡಬಹುದು ಎಂದರು.

ತಂತ್ರಜ್ಞಾನ ಜನರಿಗೆ ತಲುಪಿಲಿ:

ತಂತ್ರಜ್ಞಾನ ಹೆಚ್ಚಾಗಿದೆ. ರೋಗಗಳು ಹೆಚ್ಚಾಗಿದೆ. ತಂತ್ರಜ್ಞಾನ ಸಾಮಾನ್ಯರಿಗೆ ತಲುಪದಿದ್ದರೆ ಪ್ರಯೋಜನವೇ ಆಗೋಲ್ಲ. ಮನುಷ್ಯ ಸಾಧನೆ ಮಾಡದೆ ಬದುಕಿದರೆ ಸಾವಿಗೆ ಬೆಲೆ ಇರೋಲ್ಲ. ಮನುಷ್ಯತ್ವ ಇಲ್ಲದೆ ಬದುಕಿದರೆ ಜೀವನಕ್ಕೆ ಬೆಲೆ ಇರೋದಿಲ್ಲ ಎಂದು ಅವರು ಹೇಳಿದರು.

ಹೆಚ್ಚು ಹೆಚ್ಚು ಪದವಿ ಪಡೆಯುತ್ತಿದ್ದೇವೆ. ಆದರೆ ಸಾಮಾನ್ಯ ಜ್ಞಾನ ಕಡಿಮೆ ಆಗ್ತಿದೆ. ನಮ್ಮಲ್ಲಿ ಎಷ್ಟೇ ವಿದ್ಯೆ ಇದ್ದರೂ ಅದು ಬದುಕಿಗಿಂತ ಯಾವುದು ಮುಖ್ಯವಲ್ಲ. ಮನೆ ದೊಡ್ಡದಾಗುತ್ತಿವೆ, ಆದರೆ ಮನೆಯೊಳಗೆ ಇರುವವರು ಸಣ್ಣವರಾಗುತ್ತಿದ್ದೇವೆ. ಇದೆಲ್ಲವನ್ನ ನಾವು ಬದಲಾಯಿಸಿಕೊಳ್ಳಬೇಕು. ನಾವು ಸಮಾಜದ ಆರೋಗ್ಯ ಕಾಪಾಡಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ

ವೈದ್ಯರಿಗೆ ಕೊಟ್ಟ ಗೌರವ

ದಸರಾ ಇತಿಹಾಸದಲ್ಲೆ ಮೊದಲ ಬಾರಿಗೆ ವೈದ್ಯರೊಬ್ಬರ ಉದ್ಘಾಟನೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಇದು ಹಿಡಿಯುವ ವೈದ್ಯರಿಗೆ ಕೊಟ್ಟ ಗೌರವ ಇದಕ್ಕಾಗಿ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ನನಗೆ ಸಿಕ್ಕ ದೊಡ್ಡ ಗೌರವ ಎಂದು ಡಾಕ್ಟರ್ ಸಿಎನ್ ಮಂಜುನಾಥ್ ಹೇಳಿದ್ದಾರೆ.
ದಸರಾ ಆರಂಭಿಸಿದ ಯದುವಂಶರು ಜನರ ಅರಸರಾಗಿದ್ಧರು. ಅಂತಹ ದಸರಾದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ಕನ್ನಡದ ಜೊತೆ ಇಂಗ್ಲಿಷ್ ಭಾಷೆ ಬೇಕು. ನನ್ನ ಪತ್ನಿ ಹಾಗೂ ಮಕ್ಕಳು ಹೇಳಿದ್ದಾರೆ. ನಮಗಾಗಿ ಏನೂ ಕೇಳಬೇಡಿ ಅಂತ ಹೀಗಾಗಿ ಚಾಮುಂಡಿಯಲ್ಲಿ ಮೂರು ವಿಚಾರ ಬೇಡಿಕೊಂಡೆ ಶೀಘ್ರವೇ ಕೊರೊನಾ ಸೋಂಕು ಮಾಯವಾಗಲಿ ಎಂದು ಎನ್ನುವ ಸಂಗತಿಯನ್ನು ಅವರು ತಿಳಿಸಿದರು

ಹುತಾತ್ಮರು ಎನ್ನಲು ಸಲಹೆ
ಕೊರೊನಾ ಸೋಂಕು ವಿರುದ್ಧ ಹೋರಾಡಿ ಮೃತಪಟ್ಟಿರುವ ಕೊರೋನಾ ಸೇನಾನಿಗಳನ್ನು ಹುತಾತ್ಮರು ಎಂದು ಕರೆಯುವಂತೆ ಡಾ.ಸಿ.ಎನ್ ಮಂಜುನಾಥ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ದೇಶದಲ್ಲಿ ೫೦೦ಕ್ಕೂ ಹೆಚ್ಚು ವೈದ್ಯರು,೭೦೦ಕ್ಕೂ ಹೆಚ್ಚು ದಾದಿಯರು, ಟೆಕ್ನೀಷಿಯನ್ ಗಳು ಕೊರೋನಾ ಸೋಂಕಿನಿಂದ ಮತಪಟ್ಟಿದ್ದಾರೆ ಅವರನ್ನು ಹುತಾತ್ಮರನ್ನು ಕರೆಯಬೇಕು ಮತ್ತು ಅವರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಶ್ರೀಘ್ರ ನೀಡಬೇಕು ಎಂದು ಮನವಿ ಮಾಡಿದರು