ಲಸಿಕೆ ಸಂಗ್ರಹ, ಸಾಗಾಣಿಕೆ ಸಿದ್ಧತೆ

ನವದೆಹಲಿ,ಜ.೬- ದೇಶದಲ್ಲಿ ಕೊರೊನಾಗೆ ಇನ್ನು ೧೦ ದಿನಗಳಲ್ಲಿ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಲಸಿಕೆ ಸಾಗಾಣೆ, ಸಂಗ್ರಹಣೆ ಎಲ್ಲದಕ್ಕೂ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ದೇಶದಲ್ಲಿ ಈಗಿರುವ ಲಸಿಕೆ ನೀಡಿಕೆ ವ್ಯವಸ್ಥೆಯನ್ನು ಬಳಸಿಕೊಂಡು ಕೋವಿಡ್ ಲಸಿಕೆ ಅಭಿಯಾನವನ್ನು ನಡೆಸಲಿದೆ.
ದೇಶದಲ್ಲಿ ಈಗಾಗಲೇ ವಿವಿಧ ಲಸಿಕೆಗಳ ಸರಪಣಿ ವ್ಯವಸ್ಥೆ ಜಾರಿಯಲ್ಲಿದ್ದು, ಈ ವ್ಯವಸ್ಥೆಯನ್ನೇ ಬಳಸಿಕೊಂಡು ದೇಶದ ಮೂಲೆ ಮೂಲೆಗೂ ಕೊರೊನಾ ಲಸಿಕೆಯನ್ನು ಕಳುಹಿಸುವ ವ್ಯವಸ್ಥೆಯನ್ನು ಕೇಂದ್ರ ಮಾಡಿಕೊಂಡಿದೆ.
ರಾಷ್ಟ್ರ ಮಟ್ಟದಿಂದ ರಾಜ್ಯ ಮಟ್ಟಕ್ಕೆ ರಾಜ್ಯಮಟ್ಟದಿಂದ ಜಿಲ್ಲಾಮಟ್ಟಕ್ಕೆ ಅಲ್ಲಿಂದ ಸ್ಥಳೀಯ ಪ್ರದೇಶಗಳಿಗೆ ಲಸಿಕೆಯನ್ನು ವಿತರಿಸುವ ಜಾಲ ರೂಪಿಸಲಾಗಿದೆ. ಈ ಲಸಿಕೆಯ ವಿತರಣೆ, ಸಂಗ್ರಹಣೆ ಎಲ್ಲವನ್ನೂ ಕೋವಿನ್ ಹೆಸರಿನ ತಂತ್ರಾಂಶದ ಮೂಲಕ ನಿರ್ವಹಣೆ ಮಾಡಲಾಗುತ್ತದೆ ಎಂದು ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್‌ಭೂಷಣ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಲಸಿಕೆ ಖರೀದಿಯ ಸಂಬಂಧ ಲಸಿಕೆ ತಯಾರಿಸಿರುವ ಕಂಪನಿಗಳ ಜತೆ ಅಂತಿಮ ಹಂತದ ಖರೀದಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿರುವಾಗಲೇ ಕೇಂದ್ರ ಆರೋಗ್ಯ ಇಲಾಖೆ ವ್ಯವಸ್ಥಿತವಾಗಿ ಕೊರೊನಾ ಲಸಿಕಾ ಅಭಿಯಾನವನ್ನು ನಡೆಸಲು ಸಿದ್ಧಗೊಂಡಿದೆ.ಕೋವಿನ್ ಲಸಿಕೆ ನಿರ್ವಹಣೆ, ವಿತರಣೆ ವ್ಯವಸ್ಥೆಗೆ ಚಾಲನೆ ನೀಡುವ ಮೂಲಕ ಲಸಿಕಾ ಉತ್ಪಾದನಾ ಕೇಂದ್ರದಿಂದ ನೇರವಾಗಿ ಲಸಿಕಾ ಸಂಗ್ರಹಣಾ ಸ್ಥಳಗಳಿಗೆ ಲಸಿಕೆಗಳನ್ನು ಸಾಗಿಸುವ ವ್ಯವಸ್ಥೆಗೂ ಸಿದ್ಧತೆ ಆಗಿದೆ.
ಮೊದಲ ಹಂತದಲ್ಲಿ ಸುಮಾರು ೩೦ ಕೋಟಿ ಜನರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.
ಲಸಿಕಾ ತಯಾರಿಕಾ ಸಂಸ್ಥೆಗಳು ಲಸಿಕೆಯನ್ನು ಮೊದಲು ವಿಮಾನದ ಮೂಲಕ ಕೇಂದ್ರಸರ್ಕಾರ ಮುಂಬೈ, ಚೆನ್ನೈ, ಕೊಲ್ಕತ್ತ ಮತ್ತು ಕರ್ನಾನ್‌ನಲ್ಲಿ ಬಂದಿರುವ ಔಷಧಿ ದಾಸ್ತಾನು ಕೇಂದ್ರಗಳಿಗೆ ತಲುಪಿಸಲಿದ್ದು, ಅಲ್ಲಿಂದ ಶೀತಲ ವಾಹನಗಳ ಮೂಲಕ ವಿವಿಧ ರಾಜ್ಯಗಳಿಗೆ ಲಸಿಕೆ ಸಾಗಾಣೆಯಾಗಲಿದೆ. ಲಸಿಕೆಯ ಸಾಗಾಣೆ ದಾಸ್ತಾನು ಎಲ್ಲವೂ ವಾಸ್ತವ ಸಮಯದಲ್ಲೇ ಡಿಜಿಟಲ್ ತಂತ್ರಾಂಶದ ನಿಗಾದಲ್ಲೇ ನಡೆಯಲಿದೆ.